ಪ್ರಜಾಸ್ತ್ರ ಸುದ್ದಿ
ವಾಯನಾಡ್(Wayanad): ಕೇರಳದಲ್ಲಿ ಸಂಭವಿಸಿದ ಭೀಕರ ಭೂಕುಸಿತದಿಂದಾಗಿ(Landslide) ಇದುವರೆಗೂ 340ಕ್ಕೂ ಹೆಚ್ಚು ಜನರು ಮೃತಪಟ್ಟಿರುವ ಮಾಹಿತಿ ತಿಳಿದು ಬಂದಿದೆ. ರಕ್ಷಣಾ ಕಾರ್ಯಾಚರಣೆ 6ನೇ ದಿನಕ್ಕೆ ಕಾಲಿಟ್ಟಿದೆ. ಮಲಪ್ಪುರಂ(malappuram), ವಾಯನಾಡ್, ಕೋಝಿಕ್ಕೋಡ್(kozhikode) ಜಿಲ್ಲೆಗಳ ಜೀವನದಿಯಾಗಿರುವ ಚಾಲಿಯಾರ್(chaliyar river) ನದಿಯಲ್ಲಿ ಹೆಣಗಳು ತೇಲಿ ಬರುತ್ತಿವೆ. ನದಿಯ ಸುಮಾರು 40 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಯುತ್ತಿದೆ.
ಮುಂಡಕ್ಕೈ, ಚೂರಲ್ಮಲಾದಿಂದ 206ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ(Missing) ಎನ್ನುವುದು ಅಧಿಕೃತ ಮಾಹಿತಿಯಾಗಿದೆ. ಇದುವರೆಗೂ ಇಲ್ಲಿ 240 ಜನರ ಮೃತದೇಹಗಳು ಪತ್ತೆಯಾಗಿವೆ. ಡ್ರೋನ್ ಗಳು, ಬೃಹತ್ ಯಂತ್ರಗಳು, ರಾಡಾರ್ ಗಳ ಮೂಲಕ ಶೋಧ ಕಾರ್ಯ ನಡೆಯುತ್ತಿದೆ. ಭೂಕುಸಿತದ ಭೀಕರತೆ ಎಷ್ಟಿದೆ ಎಂದರೆ ಅನೇಕರ ಮೃತದೇಹಗಳು ಪೂರ್ತಿಯಾಗಿ ಸಿಗದೆ ದೇಹದ ಕೆಲ ಭಾಗಗಳು ಮಾತ್ರ ಪತ್ತೆಯಾಗುತ್ತಿವೆ. ಸಂಬಂಧಿಕರು ಅವುಗಳಿಗೆ ಅಂತ್ಯಸಂಸ್ಕಾರ ಮಾಡುವ ಮೂಲಕ ಕಳೆದುಕೊಂಡ ತಮ್ಮವರಿಗೆ ಶಾಂತಿ ಸಿಗಲಿ ಎಂದು ಬೇಡಿಕೊಳ್ಳುತ್ತಿದ್ದಾರೆ.
ಚಾಲಿಯಾರ್ ನದಿಯಲ್ಲಿ 73 ಮೃತದೇಹಗಳು(Dead Body) ಪತ್ತೆಯಾಗಿವೆ. 132ಕ್ಕೂ ಹೆಚ್ಚು ದೇಹದ ಇತರೆ ಭಾಗಗಳು ಪತ್ತೆಯಾಗಿವೆ. 73 ಮೃತದೇಹಗಳಲ್ಲಿ 37 ಪುರುಷರು, 29 ಮಹಿಳೆಯರು, 4 ಹುಡುಗಿಯರು, 3 ಬಾಲಕರದ್ದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಾಪತ್ತೆಯಾದವರ ಅಂಕಿಸಂಖ್ಯೆ ನೋಡಿದರೆ ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಎಲ್ಲ ಲಕ್ಷಣಗಳಿವೆ.
ದುರಂತದ ನಡುವೆ ಕಳ್ಳರ ಅಮಾನವೀಯ ಕೃತ್ಯ:
ಭೂಕುಸಿತದಿಂದಾಗಿ ಸಾವಿರ ಸಂಖ್ಯೆಯ ಜನರು ನಿರಾಶ್ರಿತ ಪ್ರದೇಶಗಳಲ್ಲಿ ಆಶ್ರಯ ಪಡೆದಿದ್ದಾರೆ. ಅನೇಕ ಹಳ್ಳಿಗಳಲ್ಲಿ ಜನರಿಲ್ಲದೆ ಅಳಿದುಳಿದ ಮನೆಗಳಿದ್ದು, ಇಂತಹ ದುರಂತದ ನಡುವೆಯೂ ಕಳ್ಳರ ಅಮಾನವೀಯ ಕೃತ್ಯಗಳು ನಡೆಯುತ್ತಿವೆ. ಮನೆಗಳಲ್ಲಿ ಬೆಲೆ ಬಾಳುವ ವಸ್ತುಗಳ ಕಳ್ಳತನ(Theft) ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದ್ದು, ಪೊಲೀಸರು ಗಸ್ತು ತಿರುಗುತ್ತಿದ್ದಾರಂತೆ. ಮನೆ ತೊರೆದು ಜೀವ ಉಳಿಸಿಕೊಂಡಿರುವ ಜನರು ಇರುವಷ್ಟಾದರೂ ಬಿಟ್ಟು ಬಿಡಿ ಎಂದು ಬೇಡಿಕೊಳ್ಳುತ್ತಿದ್ದಾರೆ.