Ad imageAd image

ಎಲ್ಲರೂ ಜಂಗಮರಾಗಲು ಸಾಧ್ಯವಿಲ್ಲ: ಸಿದ್ದಪ್ಪ ಬಿದರಿ

Nagesh Talawar
ಎಲ್ಲರೂ ಜಂಗಮರಾಗಲು ಸಾಧ್ಯವಿಲ್ಲ: ಸಿದ್ದಪ್ಪ ಬಿದರಿ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ವಿಜಯಪುರ(Vijayapura): ಎಲ್ಲರೂ ಜಂಗಮರಾಗಲು ಸಾಧ್ಯವಿಲ್ಲ, ಜಂಗಮರು ತಲೆ ಮೇಲೆ ಜಗತ್ತಿನ ಭಾರ ಹೊತ್ತುಕೊಂಡಿದ್ದಾರೆ. ಅವರಲ್ಲಿ ನಮ್ಮನ್ನು ಬಾಗಿಸಿ ಸನ್ಮಾರ್ಗದಲ್ಲಿ ನಡೆಸುವ ಶಕ್ತಿ ಇದೆ ಅದನ್ನೇ ಶ್ರೀ ಸಿದ್ಧೇಶ್ವರ ಅಪ್ಪಾವರು ಮಾಡಿ ಹೋಗಿದ್ದಾರೆ ಎಂದು ರಾಜ್ಯೋತ್ಸವ ಪ್ರಶಸ್ತಿ ವಿಜೇತ ಸಿದ್ಧಪ್ಪ ಬಿದರಿ ಹೇಳಿದರು. ನಗರದ ಜ್ಞಾನಯೋಗಾಶ್ರಮದ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳ ಗುರುನಮನ ಕಾರ್ಯಕ್ರಮದ ಮೂರನೇ ಗೋಷ್ಠಿ `ಗ್ರಾಮ ಸಂಸ್ಕೃತಿ’ ಉದ್ಘಾಟಿಸಿ ಮಾತನಾಡಿದ ಅವರು, ಶಾಣ್ಯಾರ ಜಗಳ ಬುದ್ದಿವಳಗ, ದಡ್ಡರ ಜಗಳ ಬಡಿಗಿ ಒಳಗ ಎಲ್ಲಾರ ಜಗಳ ಒಂದೆ, ಸೋಸೆ ತಂದಾರ, ರೋಟ್ಟಿ ಬರುವಲ್ಲದು, ಮಾಸ್ತರ ನೌಕರಿ ಕೊಟ್ಟಾರ, ಕಲಿಸಾಕ ಬರುವಲ್ಲದು ಕಾರಣ ನಾವು ಗ್ರಾಮೀಣ ಸಂಸ್ಕೃತಿಯನ್ನು ಮರೆತಿದ್ದೇವೆ. ಹಿರಿಯರ ಮಾತಿಗೆ ಇಂದು ಬೆಲೆ ಇಲ್ಲದಂತಾಗಿದೆ ಇದು ಎಲ್ಲ ಸರಿಯಾಗಬೇಕಾದರೆ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳು ತಿಳಿಸಿರುವ ಗ್ರಾಮ ಸಂಸ್ಕೃತಿ, ಕೃಷಿ ಸಂಸ್ಕೃತಿಯನ್ನು ಪಾಲಿಸಬೇಕು ಎಂದರು.

ಶ್ರೀ ಸಿದ್ಧೇಶ್ವರ ಅಪ್ಪಾವರು ನನಗೆ ಜಾನಪದ ಸಾಹಿತ್ಯದ ಮೂಲಕ ಸಮಾಜವನ್ನು ಎಚ್ಚರಿಸುವ ಕೆಲಸವನ್ನು ಮುಂದುವರೆಸು ಎಂದು ಆಶೀರ್ವಾದ ಮಾಡಿ ಹೋಗಿದ್ದಾರೆ. ದಡ್ಡರಿಗೆ ಧೈರ್ಯ ಬಾಳ, ಶಾಣ್ಯಾರಿಗೆ ಸಂಶಯಬಾಳ ಹಾಗೇ ನಾನು ಜಾನಪದದ ಮೂಲಕ ತಿಳಿದಷ್ಟನ್ನು ಹೇಳುವ ಕಾರ್ಯ ಮಾಡುತ್ತಿದ್ದೇನೆ. ಇಂದು ಮಕ್ಕಳು ತಂದೆ-ತಾಯಿ ಮಾತು ಕೇಳುತ್ತಿಲ್ಲ. ಶಾಲೆಯಲ್ಲಿ ಶಿಕ್ಷಕರ ಮಾತು ಕೇಳುತ್ತಿಲ್ಲ. ನಾವು ನಮ್ಮ ಮಕ್ಕಳನ್ನು ಸರಿಯಾದ ರೀತಿಯಲ್ಲಿ ಬೆಳೆಸಬೇಕು.  ನಮ್ಮ ಆಚಾರ ವಿಚಾರಗಳನ್ನು ಮರೆಯದೆ ಗುರು ಹಿರಿಯರಿಗೆ ಗೌರವಿಸುವ ಸಂಸ್ಕಾರವನ್ನು ಮಕ್ಕಳಲ್ಲಿ ಬಿತ್ತಬೇಕು ಎಂದು ಹೇಳಿದರು.

ಅಮೇರಿಕಾದಿಂದ ಆಗಮಿಸಿದ್ದ ಶಿಲ್ಪಾ ಹಾದಿಮನಿ ಅವರು ಮಾತನಾಡಿ, ಅಪ್ಪಾವರ ದೇಹ ತ್ಯಾಗವಾಗಿ ೨ ವರ್ಷಗಳು ಕಳೆದಿವೆ. ಆದರೆ ಅವರು ನೀಡಿರುವ ಸತ್ಯ, ಪ್ರೇಮ, ಪ್ರವಚನಗಳು ನಮ್ಮೊಂದಿಗೆ ಸದಾ ಇವೆ. ಮಾನವೀಯ ಮೌಲ್ಯಗಳನ್ನು ನಮಗೆ ನೀಡಿ ಆದರ್ಶ ಬದುಕು ಸಾಗಿಸಿದ್ದಾರೆ. ಸಕಲರಿಗೂ ಲೇಸನ್ನೇ ಬಯಸಿ ಜಗತ್ತಿಗೆ ಜ್ಞಾನ ದಾಸೋಹವನ್ನು ಹಂಚಿ ಹೋಗಿದ್ದಾರೆ. ಅಮೇರಿಕಾದಲ್ಲಿ ನಾನು ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದುಕೊಂಡಿದ್ದೇನೆ. ಅದು ನನ್ನ ಬದುಕಿನ ಸಾರ್ಥಕ ಕ್ಷಣಗಳು ಎಂದು ಭಾವುಕರಾದರು.
ಬಾಗಲಕೋಟ ಭೊವಿ ಪೀಠದ ಜಗದ್ಗುರು ಇಮ್ಮಡಿ ಸಿದ್ಧರಾಮೇಶ್ವರ ಮಹಾಸ್ವಾಮೀಜಿ ಮಾತನಾಡಿ, ಜಗತ್ತಿನ ಮೊದಲ ಸಂಸ್ಕೃತಿ ಗ್ರಾಮೀಣ ಸಂಸ್ಕೃತಿ, ಕೃಷಿ ಸಂಸ್ಕೃತಿ. ನಾವು ಮೂರು ಸಂಸ್ಕೃತಿಗಳನ್ನು ನೋಡುತ್ತೇವೆ. ಗ್ರಾಮೀಣ ಜನರು ನಾವು ಇಂದು ಗ್ರಾಮಗಳಿಂದ ವಲಸೆ ಬಂದು ನಗರಗಳನ್ನು ಸೇರುತ್ತಿದ್ದೇವೆ. ಇದರಿಂದ ನಮ್ಮಲ್ಲಿನ ಸಂಬAಧಗಳ ಮೌಲ್ಯಗಳು ಕಡಿಮೆಯಾಗುತ್ತಿವೆ. ಕಾರಣ ನಾವು ನಮ್ಮ ಮೂಲ ಸಂಸ್ಕೃತಿಯನ್ನು ಮರೆಯುತ್ತಿದ್ದೇವೆ. ಕುಂಬಾರನ ಅಣತೆ, ನೇಕಾರನ ಬತ್ತಿ, ಗಾಣಿಗನ ಎಣ್ಣೆಯಂತೆ ನಾವೆಲ್ಲ ಒಂದಾಗಿ ಬದುಕಬೇಕಾಗಿದೆ. ಆಗ ಬದುಕು ಸುಂದರವಾಗುತ್ತದೆ ಎಂದರು.

ಸಿಂದಗಿಯ ಸಾರಂಗಮಠದ ಶ್ರೀ ಪ್ರಭುಸಾರಂಗ ಶಿವಾಚಾರ್ಯ ಸ್ವಾಮೀಜಿಗಳು ಮಾತನಾಡಿ, ಗ್ರಾಮ ಪಂಚಾಯತ್ ಚುನಾವಣೆಗಳು ಬಂದಾಗಿನಿAದ ಗ್ರಾಮೀಣ ಜನರ ಮನಸ್ಸನ್ನು ಕದಡುವ ಕೆಲಸ ಮಾಡಿವೆ. ಈ ಚುನಾವಣೆಗಳಿಂದ ಗ್ರಾಮಗಳು ಕೆಟ್ಟು ಹೋಗಿವೆ. ಗ್ರಾಮಗಳಲ್ಲಿ ಸೌಲಭ್ಯಗಳ ತೊಂದರೆ ಇರಬಹುದು ಆದರೆ ನೆಮ್ಮದಿ ಇದೆ. ನಗರಗಳಲ್ಲಿ ಸೌಲಭ್ಯಗಳಿವೆ ಆದರೆ ನೆಮ್ಮದಿ ಇಲ್ಲ. ಮೊದಲು ಗ್ರಾಮಗಳಲ್ಲಿ ಒಂದೇ ಗ್ರಾಮದೇವತೆ ಜಾತ್ರೆ ಇರುತ್ತಿತ್ತು. ಆದರೆ ಈಗ ಹಾಗಿಲ್ಲ, ಜಾತಿಗೊಂದು ಜಾತ್ರೆಗಳಾಗಿ ಜನರ ಹೃದಯಗಳು ಒಡೆದು ಹೋಗಿವೆ. ನಮ್ಮ ಭಾವಗಳು ಶುದ್ಧವಾಗದ ಹೊರತು ಬದುಕು ಸುಂದರವಾಗುವುದಿಲ್ಲ ಎಂದರು.

ಜ್ಞಾನಯೋಗಾಶ್ರಮದ ಅಧ್ಯಕ್ಷ ಗುರುಗಳಾದ ಶ್ರೀ ಬಸವಲಿಂಗ ಸ್ವಾಮೀಜಿಗಳು ಮಾತನಾಡಿ,  ಶ್ರೀ ಸಿದ್ಧೇಶ್ವರ ಅಪ್ಪಗಳೇ ಈ ಗ್ರಾಮ ಸಂಸ್ಕೃತಿ ಆಯೋಜನೆಗೆ ಕಾರಣಿಕರ್ತರು. ಭಾರತೀಯರು ಜ್ಞಾನದ ಬೆಳಕಿನಲ್ಲಿ ಬದುಕುವವರು. ತಂದೆ-ತಾಯಿಗಳನ್ನು ಪ್ರೀತಿಸು, ಗುರ-ಹಿರಿಯರನ್ನು ಗೌರವಿಸು, ಹಸಿದವರಿಗೆ ಅನ್ನ ಹಾಕು ಇದು ಸಿದ್ದೇಶ್ವರ ಅಪ್ಪನವರು ತಿಳಿಸಿಕೊಟ್ಟಿರುವ ಸಂಸ್ಕೃತಿ. ಅದನ್ನು ನಾವು ಪಾಲಿಸಿದರೆ ಶ್ರೀಗಳ ಆಶೀರ್ವಾದಕ್ಕೆ ಪಾತ್ರರಾಗುತ್ತೇವೆ ಎಂದರು. ಈ ಸಂದರ್ಭದಲ್ಲಿ ಜ್ಞಾನ ಯೋಗಾಶ್ರಮದ ಭಕ್ತರು, ನಾಡಿನ ಸಾಹಿತಿಗಳು, ಸ್ವಾಮೀಜಿಗಳು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article