ಪ್ರಜಾಸ್ತ್ರ ಸುದ್ದಿ
ರಾಯಚೂರು(Raichoru): ಜಿಲ್ಲೆಯ ದೇವದುರ್ಗ ತಾಲೂಕಿನ ತಿಂಥಣಿ ಬ್ರಿಡ್ಜ್ ಕಾಗಿನೆಲೆ ಕನಕ ಗುರುಪೀಠದ ಸಿದ್ದರಾಮನಂದ ಸ್ವಾಮೀಜಿ(49) ಅವರು ಹೃದಯಾಘಾತದಿಂದ ಗುರುವಾರ ನಸುಕಿನಜಾವ ನಿಧನರಾಗಿದ್ದಾರೆ. ಸುಮಾರು 3.40ರ ಸುಮಾರಿಗೆ ಎದೆ ನೋವು ಕಾಣಿಸಿಕೊಂಡಿದೆ. ಅವರನ್ನು ಲಿಂಗಸಗೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಅಷ್ಟರಲ್ಲೇ ಅವರು ನಿಧನರಾಗಿದ್ದರು ಎಂದು ಹೇಳಲಾಗುತ್ತಿದೆ.
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಕಲಮರಹಳ್ಳಿ ಗ್ರಾಮದ ಮಹದೇವಯ್ಯ ಹಾಗೂ ಜಯಮ್ಮ ದಂಪತಿಯ 2ನೇ ಪುತ್ರರು ಇವರು. ಮೋಹನ್ ಪ್ರದಾನ ಇವರ ಮೂಲ ಹೆಸರು. 18ನೇ ವಯಸ್ಸಿಗೆ ಮನೆ ತೊರೆದು ಅಧ್ಯಾತ್ಮದ ಕಡೆ ಹೆಜ್ಜೆ ಹಾಕಿದರು. ಜೈನ್, ಕ್ರೈಸ್, ಬ್ರಹ್ಮಕುಮಾರಿ ಪಂಥಗಳ ಪ್ರಭಾವಕ್ಕೆ ಒಳಗಾಗಿದ್ದರು. ವಚನ ಸಾಹಿತ್ಯದ ಜೊತೆಗೆ ಎಲ್ಲ ಧರ್ಮಗಳನ್ನು ಅಧ್ಯಯನ ಮಾಡಿದರು. ಚಿತ್ರದುರ್ಗದ ಮುರುಘಾಮಠದಲ್ಲಿ ಕೆಲ ವರ್ಷ ಇದ್ದರು.
ಮುಂದೆ ಸಿಂಧನೂರಿನಲ್ಲಿ ವಾಸ ಮಾಡಿದ್ದರು. ಸುಮಾರು 4 ವರ್ಷಗಳ ಕಾಲ ಇಲ್ಲಿದ್ದು, ಮುಂದೆ ದೇವದುರ್ಗ ತಾಲೂಕಿನ ತಿಂಥಣಿ ಬ್ರಿಡ್ಜ್ ಬಳಿ 2011ರಲ್ಲಿ ಕನಕಗುರು ಪೀಠಕ್ಕೆ ಬಂದು ಕಾಗಿನೆಲೆ ಕನಕಗುರು ಪೀಠ ಸ್ಥಾಪಿಸಿದರು. ಕೊಪ್ಪಳ ಜಿಲ್ಲೆಯ ಹಾಲವರ್ತಿ, ಕುಷ್ಟಗಿ ತಾಲೂಕಿನ ಬಾದಿಮನಾಳದಲ್ಲಿ ಶಾಖಾಮಠ ಸಹ ಸ್ಥಾಪಿಸಿದ್ದರು.
ಕನಕಪೀಠದಲ್ಲಿ ಪ್ರಾಥಮಿಕ ಶಿಕ್ಷಣದಿಂದ ಪಿಯುಸಿ ತನಕ ಶಿಕ್ಷಣ ನೀಡಲಾಗುತ್ತಿದೆ. ಬಾಗಲಕೋಟೆ ಜಿಲ್ಲೆ ಗುಡೂರಿನಲ್ಲಿ ಪದವಿ ಕಾಲೇಜು, ಮುದ್ದೇಬಿಹಾಳದಲ್ಲಿ ಪದವಿ ಕಾಲೇಜು ಸ್ಥಾಪಿಸಿ ಶಿಕ್ಷಣ ನೀಡುತ್ತಿದ್ದರು. ಇದರ ಜೊತೆಗೆ ಅನೇಕ ಕಾರ್ಯಕ್ರಗಳನ್ನು ಹಮ್ಮಿಕೊಂಡು ಬರುತ್ತಿದ್ದರು.




