ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ಶರಣರು ಬರೀ ವಚನಗಳ ಮೂಲಕ ಸಮಾಜ ಸುಧಾರಣೆ ಮಾಡಲಿಲ್ಲ. ತಮ್ಮ ಕಾಯಕದ ಮೂಲಕ ಅದನ್ನು ಸಾಧಿಸಿ ತೋರಿಸಿದರು. ಕೆರೆ, ಕಟ್ಟೆಗಳನ್ನು ನಿರ್ಮಿಸುವ ಮೂಲಕ ನೀರಾವರಿ ಕುರಿತು ಪರಿಕಲ್ಪನೆ ನೀಡಿದವರು ಶಿವಯೋಗಿ ಸಿದ್ದರಾಮೇಶ್ವರರು ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು. ಪಟ್ಟಣದ ತಾಲೂಕು ಆಡಳಿತ ಕಚೇರಿಯಲ್ಲಿ ಮಂಗಳವಾರ ಸಿದ್ದರಾಮೇಶ್ವರರ 853ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪಟ್ಟಣದಲ್ಲಿ ಹಲವು ಶರಣರ ವೃತ್ತಗಳಿದ್ದವು. ಆದರೆ ಸಿದ್ದರಾಮೇಶ್ವರರ ವೃತ್ತ ಇರಲಿಲ್ಲ. ಅದನ್ನು ಈಗ ಸ್ಥಾಪಿಸಲಾಗಿದೆ. ಭೋವಿ ಜನಾಂಗದ ಅಭಿವೃದ್ಧಿಗೆ ನಾನು ಪ್ರಯತ್ನಿಸುವೆ. ಶರಣರು ನಮಗೆಲ್ಲ ದಾರಿದೀಪ ಎಂದು ಹೇಳಿದರು.
ಉಪನ್ಯಾಸಕ ಸಿದ್ದಲಿಂಗ ಕಿಣಗಿ, ವಚನಕಾರ ಸಿದ್ದರಾಮೇಶ್ವರರ ಕುರಿತು ಉಪನ್ಯಾಸ ನೀಡಿದರು. ಹಿಕ್ಕನಗುತ್ತಿಯ ಲಿಂಗಾಯತ ಮಹಾಮಠದ ಪ್ರಭುಲಿಂಗ ಸ್ವಾಮೀಜಿ ಆಶೀರ್ವಚನ ನೀಡಿದರು. ತಹಶೀಲ್ದಾರ್ ಪ್ರದೀಪಕುಮಾರ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಆಲಮೇಲ ತಹಶೀಲ್ದಾರ್ ವಿಜಯಕುಮಾರ್, ತಾಲೂಕು ಪಂಚಾಯ್ತಿ ಇಒ ರಾಮು.ಜಿ ಅಗ್ನಿ, ಭೋವಿ ಸಮಾಜದ ತಾಲೂಕಾಧ್ಯಕ್ಷ ಪಂಡಿತ ಯಂಪೂರೆ, ಬಸವ ಮಂಟಪದ ಅಧ್ಯಕ್ಷ ಶಿವಾನಂದ ಕಲಬುರ್ಗಿ, ಗ್ರೇಡ್-2 ತಹಶೀಲ್ದಾರ್ ಇಂದಿರಾ ಬಳಗಾನೂರ ಸೇರಿ ಇತರರು ವೇದಿಕೆ ಮೇಲಿದ್ದರು.
ಈ ವೇಳೆ ರಾಜ್ಯ ಸರ್ಕಾರದ ಮಹತ್ವದ ಯೋಜನೆಯಾದ ದಾಖಲೆಗಳ ಗಣಕೀಕೃತ ಸೇವೆಗೆ ಶಾಸಕ ಅಶೋಕ ಮನಗೂಳಿ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಸುನಂದಾ ಯಂಪೂರೆ, ಶೈಲಜಾ ಸ್ಥಾವರಮಠ, ಅಶೋಕ ಅಲ್ಲಾಪೂರ, ಚಂದ್ರಶೇಖರ ದೇವರೆಡ್ಡಿ ಸೇರಿದಂತೆ ವಿವಿಧ ಸಮಾಜದ ಮುಖಂಡರು, ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.