ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ಮಾಧ್ಯಮರಂಗ ಫೌಂಡೇಶನ್ 2ನೇ ವರ್ಷಾಚರಣೆ ಪ್ರಯುಕ್ತ ಫೆಬ್ರವರಿ 28, ಶುಕ್ರವಾರ ಉಚಿತ ಆರೋಗ್ಯ ತಪಾಸಣೆ ಶಿಬಿರ ಯಶಸ್ವಿಯಾಗಿ ನಡೆಯಿತು. ಪಟ್ಟಣದ ಬಸವ ಮಂಟಪದಲ್ಲಿ ಬಿಪಿ, ಶುಗರ್, ಹಲ್ಲಿನ ಸಮಸ್ಯೆಗೆ ಸಂಬಂಧಿಸಿದಂತೆ ಉಚಿತ ಆರೋಗ್ಯ ತಪಾಸಣೆ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮವನ್ನು ಪಟ್ಟಣದ ಶ್ರೀ ಮಾತಾ ಆಸ್ಪತ್ರೆಯ ಡಾ.ಶಿವಕುಮಾರ ಪಶುಪತಿಮಠ ಅವರು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು, ಇವತ್ತಿನ ಬದುಕಿನಲ್ಲಿ ಆರೋಗ್ಯದ ಕಡೆ ಹೆಚ್ಚು ಗಮನಹರಿಸಬೇಕಾಗಿರುವುದು ಅವಶ್ಯಕವಾಗಿದೆ. ಸದಾ ಕೆಲಸದ ಒತ್ತಡದಲ್ಲಿರುವ ನಾವುಗಳು ನಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಹೀಗೆ ಮಾಡುವುದರಿಂದ ಹಲವು ಅನಾಹುತಗಳನ್ನು ತಪ್ಪಿಸಬಹುದು ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಸಂಗಮೇಶ್ವರ ಆಸ್ಪತ್ರೆಯ ಡಾ.ಶಿವಾನಂದ ಹೊಸಮನಿ ಅವರು, ಮಕ್ಕಳು ಬೇಕರಿ ಹಾಗೂ ಚೀಪ್ಸ್ ರೀತಿಯ ತಿನಿಸುಗಳನ್ನು ತಿನ್ನುವುದು ನಿಲ್ಲಿಸಬೇಕು. ಸರಿಯಾದ ಸಮಯಕ್ಕೆ ಟಿಫಿನ್, ಊಟ ಮಾಡಬೇಕು. ಇನ್ನು ಬೇಸಿಗೆ ಶುರುವಾಗಿದ್ದು, ಹೆಚ್ಚು ನೀರು, ಮಜ್ಜಿಗೆ ಕುಡಿಯಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು. ಇನ್ನೋರ್ವ ಮುಖ್ಯ ಅತಿಥಿ ಸಂಜೀವಿನಿ ಆಸ್ಪತ್ರೆಯ ಡಾ.ಹಬೀಬ್ ನಾಗರಳ್ಳಿ ಅವರು ಮಾತನಾಡಿ, ವಿದ್ಯಾರ್ಥಿಗಳು ಓದಿನ ಜೊತೆಗೆ ಊಟದ ವಿಚಾರದಲ್ಲಿ ಗಮನ ಹರಿಸಬೇಕು. ಹೆತ್ತವರು ಸಹ ಮಕ್ಕಳಿಗೆ ಏನು ಊಟಕ್ಕೆ ಕೊಡಬೇಕು ಎಂದು ಯೋಚಿಸಬೇಕು. ಯಾಕಂದರೆ ಸಣ್ಣ ಸಣ್ಣ ಮಕ್ಕಳಲ್ಲಿಯೂ ಗಂಭೀರ ಆರೋಗ್ಯ ಸಮಸ್ಯೆ ಕಾಡುತ್ತಿವೆ. ಹೀಗಾಗಿ ಓದು, ಊಟ, ದೈಹಿಕ ವ್ಯಾಯಾಮ ಮಾಡಬೇಕು ಅಂತಾ ಆರೋಗ್ಯದ ಕುರಿತು ತಿಳುವಳಿಕೆ ಮೂಡಿಸಿದರು. ವಿದ್ಯಾಚೇತನ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು, ಸಿಬ್ಬಂದಿ ಹಾಗೂ ಸಾರ್ವಜನಿಕರು ಭಾಗವಹಿಸಿ ಆರೋಗ್ಯ ತಪಾಸಣೆ ಮಾಡಿಸಿಕೊಂಡರು.

ಇನ್ನು ಸಂಜೆ ನಡೆದ ಸಮಾರೋಪ ಸಮಾರಂಭವನ್ನು ರಾಜ್ಯ ಕಾರ್ಯದರ್ಶಿ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆಯ ಪೀರು ಕೆರೂರು ಉದ್ಘಾಟಿಸಿ ಮಾತನಾಡಿದರು. ಮಾಧ್ಯಮರಂಗ ಒಳ್ಳೊಳ್ಳೆ ಕೆಲಸಗಳನ್ನು ಮಾಡಿಕೊಂಡು ಬರುತ್ತಿದೆ. ಅವರೊಂದಿಗೆ ನಾವು ಸದಾ ಇರುತ್ತೇವೆ ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಕಾರ್ಯನಿರತ ಪತ್ರಕರ್ತ ಧ್ವನಿ ಸಂಘದ ತಾಲೂಕಾಧ್ಯಕ್ಷ ಪಂಡಿತ ಯಂಪೂರೆ ಮಾತನಾಡಿ, ಈಗಾಗ್ಲೇ ಸಾಹಿತ್ಯ, ರಂಗಭೂಮಿ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡುತ್ತಿರುವ ಮಾಧ್ಯಮರಂಗ ಫೌಂಡೇಶನ್ ಇದೀಗ ಎರಡು ವರ್ಷ ಪೂರ್ಣಗೊಳಿಸಿದೆ. ಸಾಹಿತ್ಯದ ಜೊತೆಗೆ ಸಮಾಜಮುಖಿ ಕೆಲಸ ಮಾಡುವ ಸಲುವಾಗಿ ಉಚಿತ ಆರೋಗ್ಯ ಆಯೋಜಿಸಿರುವುದು ಒಳ್ಳೆಯ ಬೆಳವಣಿಗೆ. ಈ ತಂಡಕ್ಕೆ ಒಳ್ಳೆಯದಾಗಲಿ ಎಂದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶಿವಾನಂದ ಬಡಾನವರ, ನಮ್ಮ ಕರ್ನಾಟಕ ಸೇನೆ ತಾಲೂಕಾಧ್ಯಕ್ಷ ಪುಂಡಲೀಕ ಬಿರಾದಾರ, ಮಾಧ್ಯಮರಂಗ ಫೌಂಡೇಶನ್ ಉಪಾಧ್ಯಕ್ಷ ಪ್ರಕಾಶ ಏಳಗುಡ್ಡ ವೇದಿಕೆ ಮೇಲಿದ್ದರು.

ಈ ಉಚಿತ ಆರೋಗ್ಯ ಸೇವೆ ನೀಡಿದ ಮುಗುಳ್ನಗೆ ಹಲ್ಲಿನ ದವಾಖಾನೆಯ ಡಾ.ಚನ್ನಬಸವ ಗೊಟಗುಣಕಿ ಹಾಗೂ ಜಾಲಗೇರಿ ಆಸ್ಪತ್ರೆಯ ಸಿಬ್ಬಂದಿ ರಫೀಕ್ ಅವರಿಗೆ ಮಾಧ್ಯಮರಂಗ ಫೌಂಡೇಶನ್ ವತಿಯಿಂದ ಗೌರವಿಸಲಾಯಿತು. ರಾಗರಂಜನಿ ಸಂಗೀತ ಅಕಾಡಮಿಯ ಪ್ರಕಾಶ ಮೂಡಲಗಿ ಅವರು ಸ್ವಾಗತ ಗೀತೆ ಹಾಡಿದರು. ಫೌಂಡೇಶನ್ ಅಧ್ಯಕ್ಷ, ಪ್ರಜಾಸ್ತ್ರ ವೆಬ್ ಪತ್ರಿಕೆ ಸಂಸ್ಥಾಪಕ ಸಂಪಾದಕ ನಾಗೇಶ ತಳವಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ವಿಜಯಕುಮಾರ ಪೂಜಾರಿ, ಪರ್ತಕರ್ತರಾದ ನಿಂಗರಾಜ ಅತನೂರ, ಮಲ್ಲಿಕಾರ್ಜುನ ಪಟ್ಟಣಶೆಟ್ಟಿ, ಸಂಗಮೇಶ ಡಿಗ್ಗಿ, ಕಸಾಪ ಮಾಜಿ ಅಧ್ಯಕ್ಷ ಚಂದ್ರಶೇಖರ ದೇವರೆಡ್ಡಿ, ಶಿಕ್ಷಕರಾದ ಸಂಜೀವಕುಮಾರ ಡಾಂಗಿ, ರಮೇಶ ಯಳಮೇಲಿ, ರಾಜಶೇಖರ ಶೆಟ್ಟಿ, ಕರ್ನಾಟಕ ರಣಧೀರ ಪಡೆ ಉತ್ತರ ವಲಯ ಅಧ್ಯಕ್ಷ ಸಂತೋಷ ಮಣಗಿರಿ, ರಜತ್ ತಾಂಬೆ, ಸುದೀಪ ಹಿರೋಳ್ಳಿ, ಶ್ರೇಯಸ್ ಹಿರೋಳ್ಳಿ ಸೇರಿದಂತೆ ಅನೇಕರು ಭಾಗವಹಿಸಿದ್ದರು. ಶಿಕ್ಷಕ ವಿಕಾಸ ಚೌರ ನಿರೂಪಿಸಿ ವಂದಿಸಿದರು.