ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ಕಳೆದ ಮೂರ್ನಾಲ್ಕು ದಿನಗಳಿಂದ ತಾಲೂಕಿನಾದ್ಯಂತ ಮಳೆಯಾಗುತ್ತಿದೆ. ಆದರೆ, ಒಮ್ಮೆ ಭಾರೀ ಸುರಿದು ನಿಲ್ಲುತ್ತಿಲ್ಲ. ನಿರಂತರವಾಗಿ ಅಬ್ಬರ ಮಳೆಯೂ(Rain) ಇಲ್ಲ. ಮಾತನಾಡುವ ಬಾಯಿಯ ಉಗುಳು ಸಿಡಿದಂತೆ ಎನ್ನುವ ಆಡು ಮಾತಿನಂತೆ ಜಿಟಿಜಿಟಿ ಬರುತ್ತಿದೆ. ಇದರಿಂದಾಗಿ ರಸ್ತೆಯ ತುಂಬಾ ರಾಡಿ. ಜನರು ಮನೆಯಿಂದ ಹೊರ ಬರಲು ಬೇಸರ ಮಾಡಿಕೊಳ್ಳುವಂತಾಗಿದೆ. ಶಾಲಾ, ಕಾಲೇಜು ವಿದ್ಯಾರ್ಥಿಗಳು ರಜೆ ಕೊಡಬಾರದೆ ಎಂದು ಕೇಳುತ್ತಿದ್ದಾರೆ.
ಹೀಗೆ ಸಣ್ಣಗೆ ಬರುತ್ತಿರುವ ಮಳೆಯಿಂದಾಗಿ ವ್ಯಾಪಾರ(Business) ವಹಿವಾಟು(Transaction) ಮೇಲೆ ಹೊಡೆತ ಬಿದ್ದಿದೆ. ಸಣ್ಣಪುಟ್ಟ ವ್ಯಾಪಾರಿಗಳು, ತರಕಾರಿ, ಹೂವು ಹಣ್ಣು ಮಾರುವವರು, ರೈತಾಪಿ ವರ್ಗದ ಮೇಲೆ ಪರಿಣಾಮ ಬೀರಿದೆ. ಹಾಕಿದ ಬಂಡವಾಳ ಮಾರಾಟವಾಗದೆ ಹಾಗೇ ಉಳಿದು ಹೋಗುತ್ತಿದೆ. ಇದರಿಂದಾಗಿ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಬರುವುದಾದರೆ ಎರಡ್ಮೂರು ಗಂಟೆ ಭರ್ಜರಿಯಾಗಿ ಬಂದು ನಿಂತು ಬಿಡಲಿ. ಅದು ಬಿಟ್ಟು ಇದೆಂಥಾ ಮಳೆಯೆಂದು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಇನ್ನು ಸರ್ಕಾರಿ ಕಚೇರಿಗಳು(Government offices) ಸಾರ್ವಜನಿಕರಿಂದ ತುಂಬಿ ತುಳುಕುತ್ತಿದ್ದವು. ಜಿಟಿಜಿಟಿ ಮಳೆ, ಗಾಳಿಯಿಂದಾಗಿ ಜನರು ಬರುತ್ತಿಲ್ಲ. ಬಂದರೆ ವಿದ್ಯುತ್ ಸಮಸ್ಯೆಯಿಂದಾಗಿ ಯಾವುದೇ ಕೆಲಸಗಳು ಆಗುತ್ತಿಲ್ಲ. ಗಾಳಿ, ಮಳೆಯಿಂದಾಗಿ ಗಿಡ, ಮರಗಳು ಬಿದ್ದು ವಿದ್ಯುತ್(Electricity) ಸಮಸ್ಯೆಯಾದರೆ, ಕೆಲವು ಕೆಲವು ಕಡೆ ಹೊಸದಾಗಿ ಟಿಸಿ ಅಳವಡಿಸುವ ಕೆಲಸ ನಡೆದ ಪರಿಣಾಮ ವಿದ್ಯುತ್ ತೊಂದರೆಯಾಗುತ್ತಿದೆ. ಇದರಿಂದಲೂ ಸಹ ಹೋಟೆಲ್(Hotel), ಗಿರಣಿ, ಝರಾಕ್ಸ್, ಕಂಪ್ಯೂಟರ್ ಅಂಗಡಿಗಳು ಸೇರಿದಂತೆ ದಿನನಿತ್ಯ ಚಟುವಟಿಕೆಯಿಂದ ಇರುವ ವ್ಯಾಪಾರ ಸಹ ಕುಂಠಿತಗೊಂಡಿದೆ. ಒಟ್ಟಿನಲ್ಲಿ ಜಿಟಿಜಿಟಿ ಮಳಿ ಊರೆಲ್ಲ ಪಿಚಿಪಿಚಿ ಮಾಡಿ ಜನರನ್ನು ಹೈರಾಣು ಮಾಡಿದೆ.