ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ಜಿಲ್ಲೆಯ ತಾಳಿಕೋಟೆ ಪಟ್ಟಣದ ಖಾಸಗಿ ಶಾಲೆಯ ಪಕ್ಕದ ಜಮೀನಿನಲ್ಲಿ 9ನೇ ತರಗತಿ ವಿದ್ಯಾರ್ಥಿಯ ಶವ ಪತ್ತೆಯಾಗಿದೆ. ಪಟ್ಟಣದ ವಿನಾಯಕ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ಓದುತ್ತಿದ್ದ ಮಡಿವಾಳಪ್ಪ ಚಬನೂರು(15) ಅನ್ನೋ ವಿದ್ಯಾರ್ಥಿ ಮರಕ್ಕೆ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ವಿದ್ಯಾರ್ಥಿ ಮಡಿವಾಳಪ್ಪ ಸಿಂದಗಿ ತಾಲೂಕಿನ ಬೋರಗಿ ಗ್ರಾಮದವನಾಗಿದ್ದು, ತಾಳಿಕೋಟೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ.
ಅನುಮಾನಸ್ಪದ ರೀತಿಯಲ್ಲಿ ಈ ಘಟನೆ ನಡೆದಿದ್ದು, ಹೆತ್ತವರು ಶಾಲೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿಯ ನೋಟ್ ಬುಕ್ ನಲ್ಲಿ ರಕ್ತದಲ್ಲಿ ಬರೆದಿರುವ ಬರಹ ಪತ್ತೆಯಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸೋಮವಾರ ಸಂಜೆ ಬೋರಗಿ ಗ್ರಾಮದಲ್ಲಿ ವಿದ್ಯಾರ್ಥಿಯ ಅಂತ್ಯ ಸಂಸ್ಕಾರ ನಡೆಸಲಾಯಿತು ಎಂದು ತಿಳಿದು ಬಂದಿದೆ. ವಿದ್ಯಾರ್ಥಿಯ ಸಾವು ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.