ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ತಾಲೂಕಿನಾದ್ಯಂತ ತೊಗರಿ ಬೆಳೆದ ರೈತರು ಇದೀಗ ಕಂಗಾಲಾಗಿದ್ದಾರೆ. ಕಾರಣ, ಹವಾಮಾನ ವೈಪರಿತ್ಯದಿಂದಾಗುತ್ತಿರುವ ತೊಂದರೆ. ತೊಗರಿ ಬೆಳೆಯ ಹೂವು, ಕಾಯಿಗಳು ಉದುರುತ್ತಿವೆ. ಇದರಿಂದಾಗಿ ಏನು ಮಾಡಬೇಕು ಎನ್ನುವ ಚಿಂತಿಯಲ್ಲಿದ್ದಾರೆ. ಸಣ್ಣಪುಟ್ಟ ರೈತರು ಸಾಲ ಮಾಡಿ ಬಿತ್ತಿದ ಬೆಳೆ ಕೈಗೆ ಬಂದು ಒಂದಿಷ್ಟು ಆಧಾರವಾಗುತ್ತೆ ಎಂದುಕೊಳ್ಳುತ್ತಿರುವ ಹೊತ್ತಿನಲ್ಲಿ ಪ್ರಕೃತಿಯಲ್ಲಿನ ಬದಲಾವಣೆ ಭಾರೀ ಹೊಡೆತ ಕೊಟ್ಟಿದೆ.
ಈ ವರ್ಷದ ಮುಂಗಾರು ಹಂಗಾಮಿನಲ್ಲಿ ಸಾಕಷ್ಟು ಬದಲಾವಣೆಯಾಗಿದ್ದು, ಅದು ತೊಗರಿ ಬೆಳೆ ಸೇರಿದಂತೆ ಇತರೆ ಬೆಳೆಗಳ ಮೇಲೂ ಪರಿಣಾಮ ಬೀರಿದೆ. ತಣ್ಣನೆಯ ಗಾಳಿ, ಮಂಜು ಕವಿದ ವಾತಾವರಣದಿಂದಾಗಿ ಬೆಳೆ ಹಾನಿಯಾಗುತ್ತಿವೆ. ಹೀಗಾಗಿ ಬೆಳೆ ವಿಮೆ ಮಾಡಿಸಿದ ರೈತರಿಗೆ ವಿಮೆ ಪರಿಹಾರ ಒದಗಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘದ ಉತ್ತರ ವಲಯ ಅಧ್ಯಕ್ಷ ಬಸನಗೌಡ ಧರ್ಮಗೊಂಡ ಅವರು ಕೃಷಿ ಇಲಾಖೆಯ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.
ಈ ಬಗ್ಗೆ ‘ಪ್ರಜಾಸ್ತ್ರ ವೆಬ್ ಪತ್ರಿಕೆ’ಯೊಂದಿಗೆ ಮಾತನಾಡಿರುವ ಅವರು, ಸಿಂದಗಿ ತಾಲೂಕಿನಲ್ಲಿ ಸಾಕಷ್ಟು ತೊಗರಿ ಬೆಳೆ ಹಾನಿಯಾಗಿದೆ. ಹೀಗಾಗಿ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಬೆಳೆ ವಿಮೆ ಮಾಡಿಸಿದ ರೈತರಿಗೆ ಕೃಷಿ ಇಲಾಖೆ ಬೆಳೆ ವಿಮೆ ಪರಿಹಾರ ಪಡೆಯುವ ಕುರಿತು ಮಾಹಿತಿ ನೀಡಬೇಕು. ಹೊಲಗಳಿಗೆ ಬಂದು ಸರ್ವೇ ಮಾಡಿ, ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿ ವಿಮಾ ಕಂಪನಿಗಳಿಂದ ಪರಿಹಾರ ಕೊಡಿಸಬೇಕು ಎಂದು ಆಗ್ರಹಿಸಿದ್ದಾರೆ. ತೊಗರಿ ಬೆಳೆದ ರೈತರ ಸಮಸ್ಯೆಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಯಾವ ರೀತಿ ಸ್ಪಂದಿಸುತ್ತಾರೆ ಅನ್ನೋದು ಕಾದು ನೋಡಬೇಕು.