Ad imageAd image

ಮಕ್ಕಳ ಭಿಕ್ಷಾಟನೆ ಬಗ್ಗೆ ಸಾಮಾಜಿಕ ಹೋರಾಟಗಾರರು, ವಿದ್ಯಾರ್ಥಿಗಳ ಖಂಡನೆ

Nagesh Talawar
ಮಕ್ಕಳ ಭಿಕ್ಷಾಟನೆ ಬಗ್ಗೆ ಸಾಮಾಜಿಕ ಹೋರಾಟಗಾರರು, ವಿದ್ಯಾರ್ಥಿಗಳ ಖಂಡನೆ
WhatsApp Group Join Now
Telegram Group Join Now

ಪ್ರಜಾಸ್ತ್ರ ವಿಶೇಷ ಸುದ್ದಿ

ಸಿಂದಗಿ(Sindagi): ಪ್ರತಿ ಮಗು ಶಿಕ್ಷಣ ಪಡೆಯಬೇಕು. ಶಿಕ್ಷಣ ಪ್ರತಿಯೊಬ್ಬರ ಹಕ್ಕು ಎಂದು ಸರ್ಕಾರ ಹೇಳುತ್ತಲೇ ಇರುತ್ತದೆ. ಅದಕ್ಕಾಗಿ ಯೋಜನೆಗಳನ್ನು ತಂದು ಸಾರ್ವಜನಿಕರ ತೆರಿಗೆ ಹಣ ಖರ್ಚು ಮಾಡುತ್ತಲೇ ಇದೆ. ಆದರೆ, ಅದೆಷ್ಟೋ ಮಕ್ಕಳು ಇಂದಿಗೂ ಸಹ ಶಾಲೆಯಿಂದ ದೂರು ಉಳಿದಿವೆ. ಅದೆ ರೀತಿ ಪಟ್ಟಣದಲ್ಲಿ ಕೆಲ ವರ್ಷಗಳಿಂದ ವಾಸವಾಗಿರುವ ಕೆಲ ಬುಡಕಟ್ಟು(Tribe) ಸಮುದಾಯದ ಮಕ್ಕಳು ಭಿಕ್ಷಾಟನೆಯಲ್ಲಿ(Begging) ತೊಡಗಿಕೊಂಡಿವೆ. ಸಿಂದಗಿ ಪಟ್ಟಣದಲ್ಲಿ ಒಂದು ಸುತ್ತು ಹಾಕಿಕೊಂಡು ಬಂದರೆ ಹತ್ತಾರು ಸಂಖ್ಯೆಯಲ್ಲಿ ಮಕ್ಕಳು ಭಿಕ್ಷಾಟನೆಯಲ್ಲಿ ತೊಡಗಿರುವುದು ಕಂಡು ಬರುತ್ತೆ. ಸುಮಾರು ಒಂದು ವರ್ಷದ ಮಗುವಿನಿಂದ ಹಿಡಿದು 10-12 ವರ್ಷದ ಮಕ್ಕಳವರೆಗೂ(Children) ಇಲ್ಲಿ ಕಾಣಸಿಗುತ್ತಾರೆ. ಸಾರ್ವಜನಿಕರ ಹಿಂದೆ ದುಂಬಾಲು ಬಿದ್ದು ಭಿಕ್ಷೆ ಕೇಳುವ ದೃಶ್ಯ ಸಮಾನ್ಯವಾಗಿದೆ. ಇದರಿಂದಾಗಿ ಈ ಮಕ್ಕಳು ಭವಿಷ್ಯ ಹಾಳಾಗಿ ಹೋಗುತ್ತಿದೆ.

”ಸಿಂದಗಿ ಪಟ್ಟಣದಲ್ಲಿ ಮಕ್ಕಳ ಭಿಕ್ಷಾಟನೆ ಬಗ್ಗೆ ತಹಶೀಲ್ದಾರ್, ಬಿಇಎ, ಸಿಡಿಪಿಒ ಅಧಿಕಾರಿಗಳೊಂದಿಗೆ ಹತ್ತಾರು ಬಾರಿ ಮಾತನಾಡಿದ್ದೇನೆ. ಹಲವಾರು ಮನವಿಗಳನ್ನು ಕೊಟ್ಟಿದ್ದೇನೆ. ಶಾಲೆಯನ್ನು ತೊರೆದು ಮಕ್ಕಳು ಭಿಕ್ಷಾಟನೆಯಲ್ಲಿ ತೊಡಗಿದ್ದು, ಇದನ್ನು ತಡೆಯುವಲ್ಲಿ ತಾಲೂಕು ಆಡಳಿತ ಸೇರಿದಂತೆ ಸಂಬಂಧಪಟ್ಟ ಇಲಾಖೆಯವರು ಸಂಪೂರ್ಣವಾಗಿ ವಿಫಲರಾಗಿದ್ದಾರೆ”. – ಹರ್ಷವರ್ಧನ ಪೂಜಾರಿ, ಸಾಮಾಜಿಕ ಹೋರಾಟಗಾರರು

ಅತಿ ಹೆಚ್ಚಾಗಿ ಬಸವೇಶ್ವರ ವೃತ್ತ, ವಿವೇಕಾನಂದ ವೃತ್ತ, ಆರ್.ಡಿ ಪಾಟೀಲ ಕಾಲೇಜು, ಹೆಚ್.ಜಿ ಹೈಸ್ಕೂಲ್, ವಿಜಯಪುರ ರಸ್ತೆ, ಎಪಿಎಂಸಿ ಭಾಗದಲ್ಲಿ ಮಕ್ಕಳು ಗುಂಪು ಗುಂಪಾಗಿ ಕೂಡಿಕೊಂಡು ಭಿಕ್ಷಾಟನೆ ಮಾಡುತ್ತವೆ. ಕಾಲೇಜು ವಿದ್ಯಾರ್ಥಿಗಳನ್ನು, ಹಿರಿಯ ನಾಗರೀಕರನ್ನು ಹೆಚ್ಚು ಗುರಿಯಾಗಿಸಿಕೊಂಡು ಅವರ ಹಿಂದೆ ಹಿಂದೆ ಹೋಗಿ ಹಣ ಕೇಳುತ್ತಾರೆ. ಮಕ್ಕಳ ಪರಿಸ್ಥಿತಿ ಕಂಡು ಅನೇಕರು ಹಣ ಕೊಡುತ್ತಾರೆ. ಕೆಲ ಅಂಗಡಿಕಾರು, ಹೋಟೆಲ್ ನವರು ತಿನ್ನಲು ಕೊಡುತ್ತಾರೆ. ಮಾನವೀತೆಯು ಸಹ ಇಲ್ಲಿ ನಿತ್ಯ ಕಿರಿಕಿರಿ ಉಂಟು ಮಾಡುತ್ತಿದೆ. ಹೀಗಿದ್ದೂ ಇವರ ಹೆತ್ತವರು ಮಕ್ಕಳನ್ನು ಸಂಪೂರ್ಣವಾಗಿ ಭಿಕ್ಷಾಟನೆಗೆ ಇಳಿಸಿದ್ದಾರೆ.

”ಸಿಂದಗಿಯಲ್ಲಿ ಮಕ್ಕಳ ಭಿಕ್ಷಾಟನೆ ಸಾಮಾನ್ಯವಾಗಿದೆ. ಬಸವೇಶ್ವರ ಸರ್ಕಲ್ ಸುತ್ತಮುತ್ತ ಹೆಚ್ಚಿನ ಪ್ರಮಾಣದಲ್ಲಿ ಮಕ್ಕಳು ಭೀಕ್ಷೆ ಬೇಡುತ್ತಾರೆ. ನಾವು ಕಾಲೇಜಿಗೆ ಹೋಗುವ ಸಂದರ್ಭದಲ್ಲಿ ಬೆನ್ಹತ್ತಿ ಬರುತ್ತಾರೆ. ಇದರಿಂದ ನಮಗೂ ಮಾನಸಿಕ ಹಿಂಸೆಯಾಗುತ್ತೆ. ಮಕ್ಕಳ ಬಗ್ಗೆಯೂ ಕನಿಕರ ಬರುತ್ತೆ. ಸಂಬಂಧಪಟ್ಟ ಇಲಾಖೆಯವರು ಭಿಕ್ಷಾಟನೆಯಲ್ಲಿ ತೊಡಗಿರುವ ಮಕ್ಕಳಿಗೆ ಶಿಕ್ಷಣ ಸಿಗುವಂತೆ ಮಾಡಬೇಕು”. – ಲಕ್ಷ್ಮಿ ಮಲ್ಲಿಕಾರ್ಜುನ ಶಂಬೇವಾಡ, ಬಿ.ಕಾಂ ವಿದ್ಯಾರ್ಥಿನಿ

”ಈ ಕುರಿತು ಸಿಡಿಪಿಒ, ಪೊಲೀಸ್ ಸೇರಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡುತ್ತೇನೆ ಹಾಗೂ ಸಭೆ ಮಾಡುತ್ತೇನೆ. ನಮ್ಮಲ್ಲಿರುವ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರು ಪಡಿಸಿ 6 ತಿಂಗಳು ಅಥವ ಒಂದು ವರ್ಷ ಇಟ್ಟುಕೊಂಡು ಶಾಲೆಗೆ ಕಳಿಸಿ ಕೊಡುವ ವ್ಯವಸ್ಥೆ ಮಾಡಲಾಗುತ್ತೆ”. – ಕೆ.ಕೆ ಚವ್ಹಾಣ, ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ವಿಜಯಪುರ

ವಿಜಯಪುರ ನಗರದಲ್ಲಿ ಈಗಾಗ್ಲೇ ಭಿಕ್ಷಾಟನೆ ಮಾಡುವವರನ್ನು ಪುನರ್ವಸತಿ ಕೇಂದ್ರಗಳಿಗೆ ಕಳಿಸುವ ಕೆಲಸ ನಡೆಯುತ್ತಿದೆ. ಇದೆ ರೀತಿ ಸಿಂದಗಿಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಈ ಮಕ್ಕಳ ಪೋಷಕರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ಕೊಡಬೇಕು. ಅವರಿಗೆ ಶಾಲೆಗೆ ಸೇರಿಸುವ ಕೆಲಸ ಮಾಡಬೇಕು. ಹಲವಾರು ವರ್ಷಗಳಿಂದ ಪಟ್ಟಣದಲ್ಲಿಯೇ ವಾಸವಾಗಿರುವುದರಿಂದ ಈ ಮಕ್ಕಳಿಗೆ ಶಾಲೆಗೆ ಸೇರಿಸಲು ಯಾವುದೇ ರೀತಿಯ ಸಮಸ್ಯೆಯಾಗುವುದಿಲ್ಲ. ಶಿಕ್ಷಣದಿಂದ ವಂಚಿತರಾಗಿ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿರುವ ಇಂತಹ ಮಕ್ಕಳಿಗೆ ಶಿಕ್ಷಣ ಕೊಡಿಸಿ, ಭಿಕ್ಷಾಟನೆಯಿಂದ ಸಂಪೂರ್ಣವಾಗಿ ದೂರ ಇಡುವ ಕೆಲಸ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಮಾಡಬೇಕೆಂದು ಸಾರ್ವಜನಿರಕು ಆಗ್ರಹಿಸಿದ್ದಾರೆ.

WhatsApp Group Join Now
Telegram Group Join Now
Share This Article