ಪ್ರಜಾಸ್ತ್ರ ಸುದ್ದಿ
ಬೆಳಗಾವಿ(Belagavi): ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆದ ಕುಂಭಮೇಳದ ಸಂಧರ್ಭದಲ್ಲಿ ಉಂಟಾದ ಕಾಲ್ತುಳಿತದಲ್ಲಿ ಮೃತಪಟ್ಟ ಬೆಳಗಾವಿಯ ನಾಲ್ವರ ಕುಟುಂಬಸ್ಥರಿಗೆ ಉತ್ತರ ಪ್ರದೇಶ ಸರ್ಕಾರ ಪರಿಹಾರ ಬಿಡುಗಡೆ ಮಾಡಿದೆ. ಈ ಕುರಿತು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಬುಧವಾರ ಮಾಧ್ಯಮದವರಿಗೆ ತಿಳಿಸಿದ್ದಾರೆ. ಮೃತರ ಕುಟುಂಬಸ್ಥರ ಖಾತೆಗಳಿಗೆ ನೇರವಾಗಿ ಪರಿಹಾರ ಜಮೆಯಾಗಿದೆ. ಗ್ರಾಮ ಲೆಕ್ಕಾಧಿಕಾರಿ ಮೂಲಕ ನಾವು ಪರಿಶೀಲಿಸಿದ್ದೇವೆ ಎಂದಿದ್ದಾರೆ.
ಜ್ಯೋತಿ ಹತ್ತರವಾಟ, ಮೇಘಾ ಹತ್ತರವಾಟ, ಮಹಾದೇವಿ ಬಾವನೂರ, ಅರುಣ ಕೋಪರ್ಡೆ ಎಂಬುವರು ಕಾಲ್ತುಳಿತದಲ್ಲಿ ಮೃತಪಟ್ಟಿದ್ದಾರೆ. ಮೃತದೇಹಗಳ ವರದಿಯಲ್ಲಿ ಇಬ್ಬರ ಹೆಸರಿನಲ್ಲಿ ಅಕ್ಷರದೋಷ ಕಂಡು ಬಂದಿದೆ ಎಂದು ಕುಟುಂಬಸ್ಥರು ತಿಳಿಸಿದ್ದರು. ಅದನ್ನು ಸರಿಪಡಿಸಿ ಪ್ರಯಾಗ್ ರಾಜ್ ಜಿಲ್ಲಾಧಿಕಾರಿ ರವಿ ಮಂದರ್ ಅವರ ವಾಟ್ಸಪ್ ಹಾಗೂ ಮೇಲ್ ಕಳಿಸಿದ್ದೇನೆ. ಇನ್ನೆರಡು ದಿನಗಳಲ್ಲಿ ಮರಣೋತ್ತರ ವರದಿ ಹಾಗೂ ಪ್ರಮಾಣ ಪತ್ರ ಬರಲಿದೆ ಎಂದಿದ್ದಾರೆ. ಬೆಳಗಾವಿಯಿಂದ ಪ್ರಯಾಗ್ ರಾಜ್ ಕ್ಕೆ ಹೋದವರಲ್ಲಿ 16 ಮಂದಿ ಸಾವನ್ನಪ್ಪಿದ್ದಾರೆ. ನಾಲ್ವರು ಕಾಲ್ತುಳಿತದಿಂದ, ಇಬ್ಬರು ಹೃದಯಘಾತದಿಂದ ಹಾಗೂ ಉಳಿದವರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ಮಾತ್ರ ಪರಿಹಾರ ನೀಡಲಾಗಿದೆ.