ಪ್ರಜಾಸ್ತ್ರ ಸುದ್ದಿ
ಔರಂಗಬಾದ್(Aurangabad): ನಗರದಲ್ಲಿ ಕನ್ನಡಿಗರು ಹೆಚ್ಚಿನ ಪ್ರಮಾಣದಲ್ಲಿರುವ ಕಾರಣ ಛತ್ರಪತಿ ಸಂಭಾಜಿ ನಗರದಲ್ಲಿ ಭವ್ಯ ಕನ್ನಡ ಭವನ ಅವಶ್ಯಕತೆ ಇರುವ ಕಾರಣ ಕರ್ನಾಟಕ ಸರ್ಕಾರವು ಕನ್ನಡ ಭವನ ನಿರ್ಮಾಣಕ್ಕೆ ಸದಾ ಸಿದ್ಧವಿರುತ್ತದೆ. ಮುಖ್ಯಮಂತ್ರಿಗಳೊಂದಿಗೆ ಚರ್ಚೆ ಮಾಡಿ ಭವನ ನಿರ್ಮಾಣ ಮಾಡಲು ಶ್ರಮಿಸುವೇ ಹಾಗೂ ಕನ್ನಡಿಗರ ಕಷ್ಟ ಸುಖಗಳಲ್ಲಿ ಭಾಗವಹಿಸಿ ನಿಮ್ಮೊಂದಿಗೆ ನಾವಿರುತ್ತೇವೆ ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ನುಡಿದರು.
ಅವರು ಭಾನುವಾರ ಸಂಜೆ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ ಹಾಗೂ ಮರಾಠವಾಡ ಕನ್ನಡ ಸಾಂಸ್ಕೃತಿಕ ಸಂಘವು ಆಯೋಜಿಸಿದ ಕರ್ನಾಟಕ ಸಂಭ್ರಮ 50ರ ಸವಿನೆನಪು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಮುಂದಿನ ದಿನಗಳಲ್ಲಿ ನಗರದಲ್ಲಿ ಕನ್ನಡ ಭವನ ನಿರ್ಮಾಣ ಮಾಡಿಕೊಡುತ್ತೇವೆ. ಸ್ಥಳೀಯವಾಗಿ ಕನ್ನಡ ಭಾಷೆಯ ಬೆಳವಣಿಗೆಗೆ ಪೂರಕವಾಗುವ ವಾತಾವರಣ ನಿರ್ಮಾಣ ಮಾಡಿ. ಕನ್ನಡ ಭಾಷೆಯ ಅಭಿವೃದ್ದಿಗಾಗಿ ಕಂಕಣ ಬದ್ದರಾಗಿ ದುಡಿಯುತ್ತೇವೆ ಎಂದು ಹೇಳಿದರು.
ಜ್ಯೋತಿ ಬೆಳಗಿಸುವ ಮೂಲಕ ಮಹಾನಗರ ಪಾಲಿಕೆಯ ಆಯುಕ್ತ ಕನ್ನಡಿಗರಾದ ಹಿರಿಯ ಐಎಎಸ್ ಅಧಿಕಾರಿ ಜಿ.ಶ್ರೀಕಾಂತ್ ಅವರು ಸಮಾರಂಭ ಉದ್ಘಾಟಿಸಿ ಮಾತನಾಡುತ್ತಾ, ನಾವು ಎಲ್ಲೇ ಇದ್ದರೂ ಹುಟ್ಟಿದ ಸ್ಥಳ ಯಾವತ್ತೂ ಮರೆಯಬಾರದು. ನಾವು ಎಲ್ಲೇ ಇದ್ದರೂ ಕೂಡ ಎಲ್ಲೇ ಇರು ಹೇಗೆ ಇರು ನೀ ಎಂದೆಂದಿಗೂ ಕನ್ನಡವಾಗಿರು ಎಂಬ ಮಾತಿನಂತೆ ನಾವು ನಮ್ಮ ಭಾಷೆ ಮರಿಯಬಾರದು ಎಂದರು. ಮರಾಠಿಕರು ಮತ್ತು ಕನ್ನಡ ಜನರ ಮಧ್ಯೆ ಸಾಮರಸ್ಯ ಬಾಂಧವ್ಯ ಬೆಸೆದು ನಮಗೆ ಹೆಮ್ಮೆ ವಿಷಯವಾಗಿದೆ. ನನ್ನ ಎರಡು ಮಕ್ಕಳಿಗೂ ಕರ್ನಾಟಕಕ್ಕೆ ಕೊಟ್ಟಿದೆ. ಹಾಗಾಗಿ ಕರ್ನಾಟಕದ ಮತ್ತು ಮರಾಠಿಯ ಮಧ್ಯೆ ಒಳ್ಳೆ ಸ್ನೇಹ ಸಂಬಂಧವನ್ನು ಇದಿರುವುದಕ್ಕೆ ನಮ್ಮ ಕುಟುಂಬವೇ ಇಂದು ಸಾಕ್ಷಿ ಎಂದು ಮಾಜಿ ಸಚಿವ ಚಂದ್ರಕಾಂತ್ ಖೈರೆ ನುಡಿದರು.
ಕನ್ನಡ ಸೇವಕರಿಗೆ ಪ್ರಶಸ್ತಿ ಪ್ರಧಾನ : ಮರಾಠಿ ನಾಡಿನಲ್ಲಿ ಕನ್ನಡ ಸೇವೆ ಮಾಡುತ್ತಿರುವಂತಹ ಸೇವಕರನ್ನು ಪ್ರತಿ ವರ್ಷ ನೀಡುವಂತೆ ಈ ವರ್ಷ ಡಾ.ರಮೇಶ ಮೂಲಗೆ, ಔರಂಗಬಾದ್ ಮಹಾನಗರ ಪಾಲಿಕೆ ಆಯುಕ್ತರಾದ ಜಿ.ಶ್ರೀಕಾಂತ್, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಅವರಿಗೆ ಹೆಮ್ಮೆಯ ಕನ್ನಡಿಗ ಪ್ರಶಸ್ತಿಯನ್ನು ನೀಡಲಾಯಿತು. ಸಮಾಜ ಸೇವಕ, ಕನ್ನಡಿಗರೊಂದಿಗೆ ಬೆರೆತು ಸದಾ ಕನ್ನಡಿಗರೊಂದಿಗೆ ಸ್ನೇಹ ಸಂಬಂಧ ಬೆಳೆಸಿ ಕನ್ನಡಿಗರ ಬಗ್ಗೆ ಅಪಾರ ಅಭಿಮಾನ ಇಟ್ಟು ನಿರಂತರವಾಗಿ ಕನ್ನಡ ಸೇವೆ ಮಾಡುತ್ತಿರುವ ಹಿರಿಯ ರಾಜಕೀಯ ನಾಯಕ ಚಂದ್ರಕಾಂತ್ ಖೈರೆಯವರ ಸೇವೆಯನ್ನು ಗುರುತಿಸಿ ಅವರಿಗೆ, ನಾಗರಾಜ್ ತಮಟೆ, ಬೆಂಗಳೂರು ಕಲಾವಿದರಿಗೆ ಹಾಗೂ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ್ ಮತ್ತಿಹಳ್ಳಿ ಅವರಿಗೆ ಸೇವ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮರಾಠವಾಡ ಕನ್ನಡ ಸಾಂಸ್ಕೃತಿಕ ಸಂಘವು ಸನ್ಮಾನಿಸಿ ಗೌರವಿಸಿತು.
ಸಮಾರಂಭದಲ್ಲಿ ಕನ್ನಡ ಭುವನೇಶ್ವರಿ ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ಭಾವ ಚಿತ್ರಕ್ಕೆ ಪೂಜೆ ಮಾಡಲಾಯಿತು. ಕನ್ನಡ ಹಾಡುಗಳನ್ನು ಹಾಡಿದ ಬೆಂಗಳೂರಿನ ನಾಗರಾಜ ಕಲಾವಿದರ ತಂಡವು ಜನರನ್ನು ಹುರಿದುಂಬಿಸಿತು. ವೇದಿಯ ಮೇಲೆ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ ಮತ್ತಿಹಳ್ಳಿ, ಡಾ.ರಮೇಶ ಮೂಲಗೆ, ಧರ್ಮೇಂದ್ರ ಪೂಜಾರಿ ಬಗ್ದೂರಿ, ಕೇಶಪ್ಪ ಹೊನ್ನಳಿ, ಶ್ರೀನಿವಾಸ ತೇಲಂಗ ಉಪಸ್ಥಿತರಿದ್ದರು. ಧರ್ಮೇಂದ್ರ ಪೂಜಾರಿ ಬಗ್ದೂರಿಯವರು ಸ್ವಾಗತ ಕೋರಿ, ಆಶಯ ಭಾಷೆಣ ಮಾಡಿದರು. ಸಂಗೀತ ಕಂತಿ ನಿರೂಪಿಸಿದರು. ಮರಾಠವಾಡ ಕನ್ನಡ ಸಾಂಸ್ಕೃತಿಕ ಸಂಘದ ಮಹಮ್ಮದ್ ನದಾಫ, ಸಾಯಿರೆಡ್ಡಿ, ಗುರು, ಗಿರೀಶ, ವಿಠಲ ಗುಮಾಸ್ತೆ, ಶ್ರೀಶೈಲ, ಅಶೋಕ ಗುರನಾಳೆ ಸೇರಿ ಅನೇಕರಿದ್ದರು.