ಪ್ರಜಾಸ್ತ್ರ ಸುದ್ದಿ
ನವದೆಹಲಿ(New Delhi): ಕರ್ನಾಟಕದಲ್ಲಿ ಸಂಕ್ರಾಂತಿ ವೇಳೆಗೆ ಕಾಂಗ್ರೆಸ್ ನಲ್ಲಿ ದೊಡ್ಡ ಮಟ್ಟದ ಬದಲಾವಣೆಯಾಗುತ್ತದೆ ಎಂದು ಹೇಳಲಾಗುತ್ತಿದೆ. ಅದರಲ್ಲೂ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ನಿತ್ಯ ಚರ್ಚೆ ನಡೆಯುತ್ತಲೇ ಇದೆ. ಈ ಬಗ್ಗೆ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಮೌನ ಮುರಿದಿದ್ದು, ನಮ್ಮಲ್ಲಿ ಕೆಲವರು ಅಧಿಕಾರ ಹಂಚಿಕೊಳ್ಳಲು ಒಪ್ಪಲ್ಲ. ಸೋನಿಯಾ ಗಾಂಧಿಯವರ ತ್ಯಾಗವನ್ನು ಯಾರೂ ಮರೆಯುವಂತಿಲ್ಲ ಎಂದು ಹೇಳುವ ಮೂಲಕ ಪರೋಕ್ಷವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಟಾಂಗ್ ಕೊಟ್ಟಿದ್ದಾರೆ.
ದೆಹಲಿಯಲ್ಲಿ ಮಾತನಾಡಿದ ಅವರು, ನಿಜವಾದ ನಾಯಕತ್ವ ಎಂದರೆ ಅಧಿಕಾರಕ್ಕಿಂತ ತ್ಯಾಗ ಮುಖ್ಯ ಅನ್ನೋದನ್ನು ಸೋನಿಯಾ ಗಾಂಧಿಯವರು ತೋರಿಸಿದ್ದಾರೆ. ಇಂದು ಸಣ್ಣ ಮಟ್ಟದ ಹುದ್ದೆಯನ್ನು ಯಾರಾದರೂ ಬಿಟ್ಟು ಕೊಡುತ್ತಾರೆಯೇ? ಪಂಚಾಯ್ತಿ ಮಟ್ಟದಲ್ಲಿಯೂ ಅಧಿಕಾರ ತ್ಯಾಗ ಮಾಡುವುದಿಲ್ಲ. ಆದರೆ, ಸೋನಿಯಾ ಗಾಂಧಿಯವರ ತ್ಯಾಗ ದೊಡ್ಡದು. ನನ್ನಲ್ಲಿ ನಂಬಿಕೆ ಇಟ್ಟರು. ಬೆಂಬಲಕ್ಕೆ ನಿಂತರು. ಮುನ್ನಡೆಸುವ ಜವಾಬ್ದಾರಿಯನ್ನು ನನಗೆ ನೀಡಿದರು. ಅವರಿಗೆ ಹೃದಯಪೂರ್ವಕ ಧನ್ಯವಾದಗಳು ಎಂದಿದ್ದಾರೆ.