Ad imageAd image

ಶೀಘ್ರದಲ್ಲೇ 30 ಸಾವಿರ ಎಕರೆ ನೀರಾವರಿಗೊಳಿಸುವ ಕಾಮಗಾರಿ: ಸಚಿವ ಎಂ.ಬಿ ಪಾಟೀಲ

Nagesh Talawar
ಶೀಘ್ರದಲ್ಲೇ 30 ಸಾವಿರ ಎಕರೆ ನೀರಾವರಿಗೊಳಿಸುವ ಕಾಮಗಾರಿ: ಸಚಿವ ಎಂ.ಬಿ ಪಾಟೀಲ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ವಿಜಯಪುರ(Vijayapura): ಅರ್ಜುಣಗಿ, ಕುಮಠೆ, ತೊದಲಬಾಗಿ, ಹೆಬ್ಬಾಳಟ್ಟಿ, ತಿಗಣಿಬಿದರಿ, ನಾಗರಾಳ, ಗದ್ಯಾಳ, ಗೋಠೆ, ಯಕ್ಕುಂಡಿ, ವಕ್ಕುಂಡಿ, ನಿಡೋಣಿ, ಶೇಗುಣಸಿ ಗ್ರಾಮಗಳ 30 ಸಾವಿರ ಎಕರೆಗೆ ನೀರಾವರಿ ಸೌಲಭ್ಯ ಒದಗಿಸುವ 5ಎ-5ಬಿ ಏತ ನೀರಾವರಿ ಯೋಜನೆ ಹಾಗೂ ಬಬಲೇಶ್ವರ  ವಿತರಣಾ ಕಾಲುವೆ ನಂಬರ್ 15ರ ಕಾಮಗಾರಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಶೀಘ್ರದಲ್ಲಿಯೇ ಮಂಜೂರಾತಿ ದೊರೆತು ಕಾಮಗಾರಿ ಆರಂಭಿಸಲಾಗುವುದು  ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಖಾತೆ ಸಚಿವರಾದ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಅವರು ಹೇಳಿದರು.

ಶನಿವಾರ ಬಬಲೇಶ್ವರ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಕೆಆರ್‌ಐಡಿಎಲ್ ವತಿಯಿಂದ ರೂಪಾಯಿ 25 ಲಕ್ಷ ವೆಚ್ಚದಲ್ಲಿ ಆರ್‌ಐಡಿಎಫ್ ಯೋಜನೆಯಡಿ ರೈತ ಸಂಪರ್ಕ ಕೇಂದ್ರದಲ್ಲಿ ಗೋದಾಮು ಕಟ್ಟಡ ಉದ್ಘಾಟನೆ, ಪಟ್ಟಣ ಪಂಚಾಯತಿ ವತಿಯಿಂದ 264 ಲಕ್ಷ ರೂಪಾಯಿ ವೆಚ್ಚದಲ್ಲಿ ವಿವಿಧ 9 ಕಾಮಗಾರಿಗಳ ಭೂಮಿಪೂಜೆ, ಬಬಲೇಶ್ವರ ತಾಲೂಕಾ ಪಂಚಾಯತಿ ವತಿಯಿಂದ ಆಯ್ಕೆಯಾದ ಫಲಾನುಭವಿಗಳಿಗೆ 45 ಹೊಲಿಗೆ ಯಂತ್ರಗಳ ವಿತರಣೆ, ಆರೋಗ್ಯ ಇಲಾಖೆ ವತಿಯಿಂದ 250 ಲಕ್ಷ ರೂಪಾಯಿ ವೆಚ್ಚದಲ್ಲಿ ಬಬಲೇಶ್ವರ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ಶಂಕು ಸ್ಥಾಪನೆ, ಸಮಾಜ ಕಲ್ಯಾಣ ಇಲಾಖೆ ವತಿಯಿಂದ 17 ಕೋಟಿ ರೂಪಾಯಿ ವೆಚ್ಚದಲ್ಲಿ ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆ ಕಟ್ಟಡ ಶಂಕು ಸ್ಥಾಪನೆ, ಕಂದಾಯ ಇಲಾಖೆ ವತಿಯಿಂದ ಬಬಲೇಶ್ವರ ತಾಲೂಕಿನ ಭೂಮಾಪನ ಕಚೇರಿ ಉದ್ಘಾಟನೆ, ಬಬಲೇಶ್ವರ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷರ ಕಾರ್ಯಾಲಯ ಕಾರ್ಯಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಜಿಲ್ಲೆಯ ಸಮಗ್ರ ಅಭಿವೃದ್ದಿಗಾಗಿ ಆರೋಗ್ಯ, ಶಿಕ್ಷಣ, ನೀರಾವರಿ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಲಾಗುತ್ತಿದೆ.  ವಿಶೇಷವಾಗಿ ಬಬಲೇಶ್ವರ ಮತ್ತು ತಿಕೋಟಾ ಭಾಗದ ನೀರಾವರಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿದ ಸಂತೃಪ್ತಿ ನನಗಿದೆ. ಈ ಭಾಗದಲ್ಲಿ ಅನುಷ್ಠಾನಗೊಳಿಸಿದ ಯೋಜನೆಗಳು ಮುಂದಿನ ಭವಿಷ್ಯ ರೂಪಿಸಿಕೊಳ್ಳಲು ಈ ಯೋಜನೆಗಳು ಭದ್ರ ಬುನಾದಿ ಒದಗಿಸಿವೆ. ಬರದ ನಾಡನ್ನು ನೀರಾವರಿಗೊಳಪಡಿಸಿ ಜಿಲ್ಲೆಯ ಇತಿಹಾಸ ಬದಲಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದೇನೆ ಎಂದು ಹೇಳಿದರು.

ಇಂಡಿ ತಾಲೂಕಿನ 25 ಕೆರೆಗಳಿಗೆ ನೀರು ಒದಗಿಸಲು ಕ್ರಮ ವಹಿಸಲಾಗುತ್ತಿದ್ದು, ಇದರಿಂದ ಈ ಭಾಗದಲ್ಲಿ ಜನ-ಜಾನುವಾರುಯಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗುವುದಿಲ್ಲ ಎಂದು ಹೇಳಿದ ಅವರು, ಜಿಲ್ಲೆಯ ಹಳ್ಳಗಳನ್ನು ತುಂಬಿಸುವ  ಮೂಲಕ ಅಂತರಜಲಮಟ್ಟ ಹೆಚ್ಚಿಸಿ ರೈತರ ಬಾಳನ್ನು ಬೆಳಗಿಸುವ ತಮ್ಮ ಕನಸಿನ ಯೋಜನೆ ಕುರಿತು ಅಭಿಪ್ರಾಯಿಸಿದ ಅವರು, ಜಿಲ್ಲೆಯ ಕಾಲುವೆ ಜಾಲಗಳ ಹಳ್ಳಗಳಿಗೆ ಪ್ರತಿಯೊಂದು ಕಿಲೋ ಮೀಟರ್ ಗೆ ಚೆಕ್ ಡ್ಯಾಂ ನಿರ್ಮಿಸಿ ನೀರನ್ನು ಇಂಗುವಂತೆ ಮಾಡಿ ಅಂತರಜಲವನ್ನು ಹೆಚ್ಚಿಸಲು ಕ್ರಮ ವಹಿಸುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಡಾ.ಮಹಾದೇವ ಜಗದ್ಗುರುಗಳು ಸಾನಿಧ್ಯ ವಹಿಸಿದ್ದರು. ಧಾರವಾಡ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಗ್ಯಾರಂಟಿ ಯೋಜನೆಗಳ ಜಿಲ್ಲಾ ಅಧ್ಯಕ್ಷ ಇಲಿಯಾಸ ಬೋರಾಮಣಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ಬದ್ರೂದ್ದಿನ ಸೌದಾಗರ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ವಿವಿಧ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article