ಪ್ರಜಾಸ್ತ್ರ ಸುದ್ದಿ
ದಕ್ಷಿಣ ಆಫ್ರಿಕಾ ವಿರುದ್ಧದ 4 ಟಿ-20 ಪಂದ್ಯಗಳ ಸರಣಿಯ ಕೊನೆಯ ಪಂದ್ಯದಲ್ಲಿ ಟೀಂ ಇಂಡಿಯಾ ಯುವ ಆಟಗಾರರ ಅಬ್ಬರಕ್ಕೆ ಸೌಥ್ ಆಫ್ರಿಕಾ ಅಕ್ಷರಶಃ ಬೆದರಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿದ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಪ್ಲಾನ್ ಸಂಪೂರ್ಣ ವರ್ಕೌಟ್ ಮಾಡಿದವರು ಸಂಜು ಸ್ಯಾಮ್ಸನ್ ಹಾಗೂ ತಿಲಕ್ ವರ್ಮಾ. ಇವರಿಬ್ಬರ ಆರ್ಭಟಕ್ಕೆ ಆಫ್ರಿಕಾ ಬೌಲರ್ ಗಳು ಬೆವತು ಹೋದರು. ಇದರೊಂದಿಗೆ ದಾಖಲೆಗಳ ಸುರಿಮಳೆಯಾಗಿದೆ.
ಸಂಜು ಸ್ಯಾಮ್ಸನ್ ಅಜೇಯ 109 ರನ್( 9ಸಿಕ್ಸ್, 6 ಫೋರ್) ಹಾಗೂ ತಿಲಕ್ ವರ್ಮಾ ಅಜೇಯ 120 ರನ್( 10ಸಿಕ್ಸ್, 9 ಫೋರ್) ಗಳ ಹೊಳೆ ಹರಿಸುವ ಮೂಲಕ ಕೇವಲ 1 ವಿಕೆಟ್ ನಷ್ಟಕ್ಕೆ ಬರೋಬ್ಬರಿ 283 ರನ್ ಗಳನ್ನು ಕಲೆ ಹಾಕಿತು. ಅಭಿಷೇಕ್ ಶರ್ಮಾ 36 ರನ್ ಗೆ ಔಟ್ ಆದರು. ಈ ಸ್ಕೋರ್ ಚೇಸ್ ಮಾಡಿದ ಸೌಥ್ ಆಫ್ರಿಕಾ 18.2 ಓವರ್ ಗಳಲ್ಲಿ 148 ರನ್ ಗಳಿಗೆ ಆಲೌಟ್ ಆಗುವ ಮೂಲಕ ಸೋಲು ಒಪ್ಪಿಕೊಂಡಿತು. ಟೀಂ ಇಂಡಿಯಾ 135 ರನ್ ಬೃಹತ್ ಅಂತರದಿಂದ ಗೆದ್ದು 3-1ರಿಂದ ಸರಣಿ ತನ್ನದಾಗಿಸಿಕೊಂಡಿತು.
ದಾಖಲೆಗಳ ಸುರಿಮಳೆ:
ಈ ಗೆಲುವಿನೊಂದಿಗೆ ಭಾರತ ತಂಡ ಹಲವು ದಾಖಲೆಗಳನ್ನು ಬರೆಯಿತು. ವಿದೇಶಿ ನೆಲದಲ್ಲಿ ಅಂತಾರಾಷ್ಟ್ರೀಯ ಟಿ-20 ಪಂದ್ಯದಲ್ಲಿ ಅತಿ ಹೆಚ್ಚು ರನ್ ಬಾರಿಸಿದ ತಂಡವಾಗಿ ಭಾರತ ಹೊರ ಹೊಮ್ಮಿತು. ಸಂಜು ಸ್ಯಾಮ್ಸನ್ ಒಂದೇ ವರ್ಷದಲ್ಲಿ 3 ಶತಕ ಸಿಡಿಸಿದ ಮೊದಲ ಬ್ಯಾಟರ್ ಆಗಿದ್ದಾರೆ. ಒಂದೇ ಸರಣಿಯಲ್ಲಿ 2 ಶತಕ ಸಿಡಿದ ಸಾಧನೆ ಸಹ ಮಾಡಿದರು. ಒಂದೇ ಇನ್ನಿಂಗ್ಸ್ ನಲ್ಲಿ ಇಬ್ಬರು ಶತಕ ಸಿಡಿಸಿದ್ದು ಇದೇ ಮೊದಲು.
ಟಿ-20 ಪಂದ್ಯದಲ್ಲಿ 210 ರನ್ ಗಳ ಜೊತೆಯಾಟ(ಸಂಜು ಸ್ಯಾಮ್ಸನ್-ತಿಲಕ್ ವರ್ಮಾ) ಬಂದಿದ್ದು ದಾಖಲೆ ಆಯ್ತು. ಇದರ ಜೊತೆಗೆ 23 ಸಿಕ್ಸ್ ಗಳು ಬಾರಿಸುವ ಮೂಲಕ ಒಂದೇ ಇನ್ನಿಂಗ್ಸ್ ಅತಿ ಹೆಚ್ಚು ಸಿಕ್ಸ್ ಬಂದವು. 27 ಸಿಕ್ಸ್ ಬಾರಿಸಿದ ಜಿಂಬಾಬ್ವೆ ಮೊದಲು, 26 ಸಿಕ್ಸ್ ಸಿಡಿಸಿದ ನೇಪಾಳ ದ್ವಿತೀಯ ಸ್ಥಾನದಲ್ಲಿವೆ. ಒಟ್ಟಿನಲ್ಲಿ ಟೀಂ ಇಂಡಿಯಾ ಯುವ ಪಡೆ ವಿದೇಶಿ ನೆಲದಲ್ಲಿ ಹಲವು ದಾಖಲೆಗಳನ್ನು ಬರೆಯಿತು.