ಪ್ರಜಾಸ್ತ್ರ ಸುದ್ದಿ
ಲಾರ್ಡ್ಸ್(Lords): ಕ್ರಿಕೆಟ್ ಕಾಶಿ ಲಾರ್ಡ್ಸ್ ನಲ್ಲಿ ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್ಸ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ದಕ್ಷಿಣ ಆಫ್ರಿಕಾ ಭರ್ಜರಿ ಗೆಲುವು ಸಾಧಿಸುವ ಮೂಲಕ ದಾಖಲೆ ಬರೆದಿದೆ. 27 ವರ್ಷಗಳಲ್ಲಿ ಯಾವ ನಾಯಕನೂ ಮಾಡದ ಸಾಧನೆಯನ್ನು ಆಫ್ರಿಕಾ ತಂಡದ ನಾಯಕ ಟೆಂಬಾ ಬವುಮಾ ಮಾಡಿದ್ದಾರೆ. ಅಲ್ಲದೇ ಟೆಸ್ಟ್ ತಂಡದ ನಾಯಕನಾಗಿ ಒಂದೂ ಪಂದ್ಯವನ್ನು ಸೋಲದ ಬವುಮಾ ಅವರ ಗೆಲುವಿನ ನಾಗಾಲೋಟ ಮುಂದುವರೆದಿದೆ. ಇನ್ನೊಂದು ಕಡೆ ಕಳೆದ 10 ವರ್ಷಗಳಿಂದ ಫೈನಲ್ ಪಂದ್ಯವಾಡಿದ ಆಸೀಸ್ ಹಜಲ್ ವುಡ್ ಒಮ್ಮೆಯೂ ಸೋಲು ಕಂಡಿರಲಿಲ್ಲ. ಅದಕ್ಕೆ ಇದೀಗ ಬ್ರೇಕ್ ಬಿದ್ದಿದೆ.
ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ ನಲ್ಲಿ 212 ರನ್ ಗಳಿಗೆ ಆಲೌಟ್ ಆಗಿತ್ತು. ಆಫ್ರಿಕಾ ಕೇವಲ 138 ರನ್ ಗಳಿಗೆ ಆಲೌಟ್ ಆಗಿ 74 ರನ್ ಗಳ ಹಿನ್ನೆಡೆ ಅನುಭವಿಸಿತು. 2ನೇ ಇನ್ನಿಂಗ್ಸ್ ಆಡಿದ ಪ್ಯಾಟ್ ಕಮಿನ್ಸ್ ನಾಯಕತ್ವದ ಆಸೀಸ್ 207 ರನ್ ಗಳಿಗೆ ಆಲೌಟ್ ಆಯಿತು. ಇದರಿಂದಾಗಿ ಸೌಥ್ ಆಫ್ರಿಕಾಗೆ 282 ರನ್ ಗಳ ಗುರಿ ನೀಡಲಾಯಿತು. ಆಡಿನ್ ಮಾರ್ಕ್ಂ ಭರ್ಜರಿ 136 ರನ್, ನಾಯಕ ಟೆಂಬಾ 66 ರನ್ ಗಳಿಂದಾಗಿ 5 ವಿಕೆಟ್ ನಷ್ಟಕ್ಕೆ 282 ರನ್ ಗಳಿಸಿ ವಿಜಯ ಸಾಧಿಸಿತು. ಇದರೊಂದಿಗೆ ಮೊದಲ ಬಾರಿಗೆ ಐಸಿಸಿ ಚಾಂಪಿಯನ್ಸ್ ಆಗಿದೆ.
ಫೈನಲ್ ಗೆ ಬಂದು ಎಡವುತ್ತಿದ್ದ ಸೌಥ್ ಆಫ್ರಿಕಾ ಇದೀಗ ಆ ತಪ್ಪು ಮಾಡದೆ ಗೆಲುವು ಸಾಧಿಸಿದೆ. ನಾಯಕ ಟೆಂಬಾ ಆರಂಭದ ದಿನದಿಂದಲೂ ಟೀಕೆಗೆ ಗುರಿಯಾಗಿದ್ದಾರೆ. ಇದೀಗ ಅದೆಲ್ಲವೂ ಧೂಳೀಪಟವಾಗಿದೆ. ದಕ್ಷಿಣ ಆಫ್ರಿಕಾ ತಂಡ ಮಾತ್ರವಲ್ಲ ಕ್ರಿಕೆಟ್ ಪ್ರೇಮಿಗಳಿಗೂ ಸಹ ಸಾಕಷ್ಟು ಖುಷಿಯಾಗಿದೆ.