ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ರಾಜ್ಯಪಾಲರ ಭಾಷಣದ ಮೇಲೆ ಸದನದಲ್ಲಿ ಚರ್ಚೆ ನಡೆಯುತ್ತಿದ್ದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡುತ್ತಿದ್ದರು. ಈ ವೇಳೆ ಬಿಜೆಪಿ ಶಾಸಕ ಹರೀಶ್ ಪೂಂಜಾ, ಅಂಬೇಡ್ಕರ್ ಅವರನ್ನು ಸೋಲಿಸಿದ್ದು ಯಾರು ಎಂದು ಪ್ರಶ್ನಿಸಿದರು. ಇದು ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಮಾತಿನ ಚಕಮಕಿಗೆ ಕಾರಣವಾಯಿತು. ಎಸ್ ಸಿ ಎಸ್ ಪಿ, ಟಿಎಸ್ ಪಿ ನಿಧಿಯನ್ನು ಗ್ಯಾರೆಂಟಿ ಯೋಜನೆಗಳಿಗೆ ಬಳಸಲಾಗಿದೆ ಅನ್ನೋ ಆರೋಪ ಕುರಿತು ಮುಖ್ಯಮಂತ್ರಿ ಮಾತನಾಡುವಾಗಲೂ ಬಿಜೆಪಿ ಸದಸ್ಯರು ಗಲಾಟೆ ಶುರು ಮಾಡಿದರು. ಆಗ ಸ್ಪೀಕರ್ ಯು.ಟಿ ಖಾದರ್, ಎಲ್ಲದಕ್ಕೂ ಒಂದು ಮಿತಿ ಇರುತ್ತೆ. ನೀವು ಕೇಳಲು ಬಯಸದಿದ್ದರೆ ಸದನದಿಂದ ಹೊರ ನಡೆಯಿರು ಎಂದು ಖಡಕ್ ಆಗಿ ಹೇಳಿದರು.
ಇನ್ನು ಬಿಜೆಪಿ ಶಾಸಕ ಹರೀಶ್ ಪೂಂಜಾ ಬೇರೆಯವರ ಆಸನದಲ್ಲಿದ್ದು ಮಾತನಾಡುತ್ತಿದ್ದರು. ನಿನ್ನ ಸೀಟಿಗೆ ಹೋಗು ಮಾತನಾಡು. ಇಲ್ಲಂದ್ರೆ ಹೊರಗೆ ನಡಿ. ಇಲ್ಲದಿದ್ದರೆ ಬಿಸಾಡಬೇಕಾಗುತ್ತೆ ಎಂದು ಎಚ್ಚರಿಕೆ ಕೊಟ್ಟರು. ಸ್ಪೀಕರ್ ಅವರ ಬಿಸಾಡಬೇಕಾಗುತ್ತೆ ಪದಕ್ಕೆ ಬಿಜೆಪಿ ಹಿರಿಯ ಸದಸ್ಯ ಸಿ.ಸಿ ಪಾಟೀಲ ಆಕ್ಷೇಪ ವ್ಯಕ್ತಪಡಿಸಿದರು. ಅದಕ್ಕೆ ಉಳಿದವರು ಧ್ವನಿಗೂಡಿಸಿದರು. ಅಂಬೇಡ್ಕರ್ ಅವರ ಬಗ್ಗೆ ಮಾತನಾಡುವಾಗ ಬಿಸಾಡುತ್ತೇವೆ ಎಂದರೆ ನಾವು ಬಿಟ್ಟಿಗೆ ಬಂದಿದ್ದೇವಾ ಎಂದು ಹರೀಶ್ ಪೂಂಜಾ ಹೇಳಿದರು. ಮಂಗಳೂರಿನ ಜ್ಯೋತಿಯಲ್ಲಿ ಒಂದು ಅಂಬೇಡ್ಕರ್ ಸರ್ಕಲ್ ಕಟ್ಟುವ ಯೋಗ್ಯತೆಯಿಲ್ಲ. ಇಲ್ಲಿ ಬಂದು ಮಾತ್ನಾಡ್ತೀರಾ ಎಂದು ಮತ್ತೆ ಸ್ಪೀಕರ್ ಗದರಿದರು. ಹೀಗಾಗಿ ಸದನದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರ ನಡುವೆ ವಾಕ್ಸಮರ ನಡೆಯಿತು.