ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದ 17 ಆರೋಪಿಗಳಲ್ಲಿ 13ನೇ ಆರೋಪಿಯಾಗಿರುವ ದೀಪಕಗೆ ಜಾಮೀನು ನೀಡಬಹುದು ಎಂದು ಸ್ವತಃ ಎಸ್ ಪಿಪಿ ಹೇಳಿದ್ದಾರೆ. ಹೀಗಾಗಿ ಆರೋಪಿ ದೀಪಕಗೆ ಜಾಮೀನು ಸಿಗುವ ಎಲ್ಲ ಸಾಧ್ಯತೆಗಳು ಇವೆ. ದೀಪಕ್ ವಿರುದ್ಧ ಕೊಲೆ ಆರೋಪವಿಲ್ಲ. ಅವರ ವಿರುದ್ಧ ಸಾಕ್ಷಿ ನಾಶದ ಆರೋಪ ಮಾತ್ರವಿದೆ. ಅವರಿಗೆ ಜಾಮೀನು ನೀಡಬಹುದು ಎಂದು ಎಸ್ ಪಿಪಿ ಪ್ರಸನ್ನಕುಮಾರ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಎ1 ಪವಿತ್ರಾಗೌಡ, ಎ2 ದರ್ಶನ್, ಎ8 ರವಿಶಂಕರ್, ಎ11 ನಾಗರಾಜು ಹಾಗೂ ಎ12 ಲಕ್ಷ್ಮಣಗೆ ಜಾಮೀನು ನೀಡಬಾರದು ಎಂದಿದ್ದಾರೆ. ಪೊಲೀಸರ ಪರವಾಗಿ ವಾದ ಮಂಡಿಸುತ್ತಿರುವ ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರಸನ್ನಕುಮಾರ್ ಕೋರ್ಟಿಗೆ ತಿಳಿಸಿದ್ದಾರೆ. ಎ1 ಆರೋಪಿ ಪವಿತ್ರಾಗೌಡ ಸೇರಿ ಇತರರ ಜಾಮೀನು ಅರ್ಜಿಯ ತೀರ್ಪು ಅಕ್ಟೋಬರ್ 14ಕ್ಕೆ ಕಾಯ್ದಿರಸಲಾಗಿದೆ. ಎ2 ದರ್ಶನ್ ಜಾಮೀನು ಅರ್ಜಿಯ ವಿಚಾರಣೆ ನಾಳೆ ಮತ್ತೆ ನಡೆಯಲಿದೆ. ದರ್ಶನ್ ಪರ ವಕೀಲರಾದ ಸಿ.ವಿ ನಾಗೇಶ್ ಮತ್ತೊಮ್ಮೆ ವಾದ ಮಂಡಿಸಲಿದ್ದಾರೆ. ಇನ್ನು ಈಗಾಗ್ಲೇ ಎ15 ನಿಖಿಲ್ ನಾಯ್ಕ, ಎ16 ಕೇಶವಮೂರ್ತಿ ಹಾಗೂ ಎ17 ಕಾರ್ತಿಕಗೆ ಜಾಮೀನು ಸಿಕ್ಕಿದೆ. ಅವರು ಇತ್ತೀಚೆಗೆ ಬಿಡುಗಡೆಯಾಗಿದ್ದಾರೆ.