ಪ್ರಜಾಸ್ತ್ರ ಸುದ್ದಿ
ಗದಗ(Gadaga): ರಾಜ್ಯ ಬಿಜೆಪಿಯಲ್ಲಿ ಯಾವುದೂ ಸರಿಯಿಲ್ಲ ಎನ್ನುವುದು ಸ್ಪಷ್ಟವಾಗಿ ಬಹಳ ದಿನಗಳಾಗಿವೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ಒಬ್ಬೊಬ್ಬರೆ ತಿರುಗಿ ಬೀಳುತ್ತಿದ್ದಾರೆ. ಬಹಿರಂಗವಾಗಿ ಬಾಯಿಗೆ ಬಂದಂತೆ ಬೈಯುತ್ತಿದ್ದಾರೆ. ಈಗ ಶ್ರೀರಾಮುಲು-ವಿಜಯೇಂದ್ರ ನಡುವಿನ ಕಿತ್ತಾಟವೂ ತಾರಕ್ಕೆ ಹೋಗಿದೆ. ಶ್ರೀರಾಮುಲುಗೆ ಕಾಂಗ್ರೆಸ್ ಆಹ್ವಾನ ನೀಡಿದೆ ಎನ್ನುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ಸಿಗೆ ಹೋಗ್ತೀನಿ ಅಂದ್ರೆ ತಡೆಯಕ್ಕೆ ಆಗುತ್ತಾ ಎನ್ನುವ ಮೂಲಕ ಗುಡುಗಿದ್ದಾರೆ. ಹೈಕಮಾಂಡ್ ಮಾತಿಗೆ ಕ್ಯಾರೆ ಅನ್ನದೆ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ಬಿಟ್ಟು ಹೋಗಲ್ಲ ಅನ್ನೋದು ಜನರಿಗೆ ಗೊತ್ತಿದೆ. ಆದರೆ, ಒಳ್ಳೆಯತನದಿಂದ ಕರೆದಿರಬಹುದು. ಹೋಗುವುದು ಬಿಡುವುದು ನನಗೆ ಬಿಟ್ಟಿದ್ದು. ಹೋಗ್ತೀನಿ ಅಂದ್ರೆ ಜೈಲಿಗೆ ಹಾಕಿ ತಡೆಯಕ್ಕೆ ಆಗುತ್ತಾ, ಈಗಿನ ಕಾಲದಲ್ಲಿ ಯಾರ ಮಾತನ್ನು ಯಾರೂ ಕೇಳುವುದಿಲ್ಲ ಎನ್ನುವ ಮೂಲಕ ಸಮಯ ಬಂದರೆ ಕಾಂಗ್ರೆಸ್ಸಿಗೆ ಹೋಗೇ ಹೋಗುತ್ತೇನೆ ಎನ್ನುವ ರೀತಿಯಲ್ಲಿ ಬಿಜೆಪಿ ಮಾಜಿ ಸಚಿವ ಶ್ರೀರಾಮುಲು ಹೇಳುವ ಮೂಲಕ ಶಾಕ್ ಕೊಟ್ಟಿದ್ದಾರೆ.