ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Vijayapura): ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಉಚ್ಛಾಟನೆ ಬಿಜೆಪಿಯಲ್ಲಿ ಸಾಕಷ್ಟು ಸಂಚಲನ ಮೂಡಿಸಿದೆ. ಇದರ ನಡುವೆ ಶಾಸಕರಾದ ಎಸ್.ಟಿ ಸೋಮಶೇಖರ್, ಶಿವರಾಮ್ ಹೆಬ್ಬಾರ್ ಉಚ್ಛಾಟನೆಯೂ ಆಗಲಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳುವ ಮೂಲಕ ಹೊಸ ಬಾಂಬ್ ಸಿಡಿಸಿದ್ದಾರೆ. ಈ ಬಗ್ಗೆ ವಿಧಾನಸಭೆ ವಿರೋಧ ಪಕ್ಷ ನಾಯಕ ಆರ್.ಅಶೋಕ್ ಮಾತನಾಡಿದ್ದು, ಪಕ್ಷ ತಾಯಿ ಇದ್ದ ಹಾಗೆ. ಪಕ್ಷದ ವಿರುದ್ಧ ಯಾವುದೇ ಹೇಳಿಕೆ ಕೊಡಬಾರದು. ಎಲ್ಲ ಮಾಹಿತಿ ಪಡೆದು ಕೇಂದ್ರ ನಾಯಕರು ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದಿದ್ದಾರೆ.
ಉಚ್ಛಾಟನೆ ವಾಪಸ್ ಪಡೆಯಿರಿ ಎಂದು ಕೇಳಲು ಕಾರ್ಯಕರ್ತರಿಗೆ ಹಕ್ಕಿದೆ. ಇನ್ನು ಜಯಮೃತ್ಯಂಜಯ ಸ್ವಾಮೀಜಿ ಎಚ್ಚರಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ನಮ್ಮದು ರಾಜಕೀಯ ಪಕ್ಷ. ಅವರದ್ದು ಮಠ. ಸ್ವಾಮೀಜಿಗಳು ಇದರ ಬಗ್ಗೆ ಮತ್ತೊಮ್ಮೆ ವಿಮರ್ಶೆ ಮಾಡಿಕೊಳ್ಳಬೇಕು. ಪಕ್ಷದ ವಿರುದ್ಧ ಯಾರೂ ಮಾತನಾಡಬಾರದು ಎಂದು ಮನವಿ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.