ಪ್ರಜಾಸ್ತ್ರ ಸುದ್ದಿ
ಬೆಳಗಾವಿ(Belagavi): ತಹಶೀಲ್ದಾರ್ ಕಚೇರಿಯಲ್ಲಿಯೇ ಸಿಬ್ಬಂದಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ ತಾಲೂಕಿನಲ್ಲಿ ನಡೆದಿದೆ. ಮಂಗಳವಾರ ಮುಂಜಾನೆ ಪ್ರಕರಣ ಬೆಳಕಿಗೆ ಬಂದಿದೆ. ರಿಸಾಲ್ದಾರ್ ಗಲ್ಲಿಯಲ್ಲಿರುವ ತಾಲೂಕು ದಂಡಾಧಿಕಾರಿಗಳ ಕಚೇರಿಯಲ್ಲಿ ಎಸ್ ಡಿಸಿ ಆಗಿದ್ದ ರುದ್ರಣ್ಣ ಯಡವಣ್ಣವರ ಆತ್ಮಹತ್ಯೆ ಮಾಡಿಕೊಂಡಿರುವ ಸಿಬ್ಬಂದಿಯಾಗಿದ್ದಾರೆ.
ಸೋಮವಾರ ರಾತ್ರಿ ಈ ಘಟನೆ ನಡೆದಿದೆಯಂತೆ. ಮಂಗಳವಾರ ಮುಂಜಾನೆ ಅಧಿಕಾರಿಗಳು, ಸಿಬ್ಬಂದಿ ಕಚೇರಿಗೆ ಬಂದಾಗ ನೇಣು ಹಾಕಿಕೊಂಡಿರುವುದು ತಿಳಿದಿದೆ. ತಹಶೀಲ್ದಾರ್ ಕೋರ್ಟ್ ಶಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ಇವರ ಪತ್ನಿ ಸಹ ಇಲ್ಲಿಯೇ ಗ್ರಾಮ ಲೆಕ್ಕಾಧಿಕಾರಿಯಾಗಿದ್ದಾರೆ. ತನ್ನ ಸಾವಿಗೆ ತಹಶೀಲ್ದಾರ್ ಬಸವರಾಜ ನಾಗರಾಳ, ಸೋಮು, ಅಶೋಕ ಕಬ್ಬಲಿಗೇರ ಎಂಬುವರೆ ನೇರ ಕಾರಣವೆಂದು ವಾಟ್ಸಪ್ ಮೆಸೇಜ್ ಅನ್ನು ಸಿಬ್ಬಂದಿಗಳ ವಾಟ್ಸಪ್ ಗ್ರೂಪ್ ನಲ್ಲಿ ಹಾಕಿದ್ದಾನಂತೆ. ಖಡೇಬಜಾರ್ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಸೋಮವಾರ ಸಂಜೆ 7.30ರ ಸುಮಾರಿಗೆ ರುದ್ರಣ್ಣ ಮೆಸೇಜ್ ಹಾಕಿದ್ದಾರೆ. ರಾತ್ರಿ 10ರ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಕಚೇರಿಯಲ್ಲಿ ತುಂಬಾ ಅನ್ಯಾಯ ನಡೆಯುತ್ತಿದೆ. ಎಲ್ಲರೂ ಒಟ್ಟಾಗಿ ಹೋರಾಡಿ ಎಂದು ಬರೆದಿದ್ದಾರಂತೆ. ಇಷ್ಟೆಲ್ಲ ವಾಟ್ಸಪ್ ಮೂಲಕ ಆತ್ಮಹತ್ಯೆ ಬಗ್ಗೆ ಹೇಳಿದ್ದರೂ ಯಾರೊಬ್ಬರು ತಡೆಯುವ ಪ್ರಯತ್ನ ಮಾಡಿಲ್ಲ ಯಾಕೆ ಎನ್ನುವ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ. ರುದ್ರಣ್ಣನ ಪತ್ನಿ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದು, ಕುಟುಂಬದಲ್ಲಿ ದುಃಖ ಮಡುಗಟ್ಟಿದೆ.