ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ. ಇದರ ನಡುವೆ ಇಡಿ ಅಧಿಕಾರಿಗಳ ವರ್ತನೆ ಖಂಡಿಸಿ ಮಂಗಳವಾರ ಕಾಂಗ್ರೆಸ್ ವಿಧಾನಸೌಧ ಮುಂಭಾಗದಲ್ಲಿನ ಗಾಂಧಿ(Gandhi) ಪ್ರತಿಮೆ ಎದುರು ಪ್ರತಿಭಟನೆ ನಡೆಸಿತು.
ಮುಖ್ಯಮಂತ್ರಿ(Siddaramaiah)ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ(DK Shivakumar) ಡಿ.ಕೆ ಶಿವಕುಮಾರ್, ಸಚಿವರಾದ ಎಂ.ಬಿ ಪಾಟೀಲ, ಕೆ.ಎಚ್ ಮುನಿಯಪ್ಪ, ಭೈರತಿ ಸುರೇಶ್, ಹೆಚ್.ಕೆ ಪಾಟೀಲ, ಜಿ.ಪರಮೇಶ್ವರ್, ದಿನೇಶ್ ಗುಂಡೂರಾವ್, ರಾಜಣ್ಣ ಸೇರಿದಂತೆ ಶಾಸಕರು, ಪರಿಷತ್ ಸದಸ್ಯರು, ಕೈ ನಾಯಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಇಡಿ ಅಧಿಕಾರಿಗಳು ನಿಗಮದ ಹಿಂದಿನ ಎಂಡಿ ಕಲ್ಲೇಶಪ್ಪ ಅವರಿಗೆ ಕಿರುಕುಳ ನೀಡಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಮಾಜಿ ಸಚಿವ ಬಿ.ನಾಗೇಂದ್ರ ಅವರ ಹೆಸರು ಹೇಳುವಂತೆ ಒತ್ತಾಯಿಸುತ್ತಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಪಕ್ಷಗಳ ವಿರುದ್ಧ ಇಡಿ(ED), ಸಿಬಿಐ, ಐಟಿ ಬಳಸುತ್ತಿರುವ ಮೋದಿ, ಶಾ ರಾಜೀನಾಮೆ ನೀಡಲಿ, ಕೇಂದ್ರ ಬಿಜೆಪಿ ಸರ್ಕಾರದ ಕೈಗೊಂಬೆ ಆಗಿರುವ ಇಡಿ, ಐಟಿ, ಸಿಬಿಐಗೆ(CBI) ಧಿಕ್ಕಾರ, ಕೇಂದ್ರ ಬಿಜೆಪಿ ಸರ್ಕಾರದ ರಾಜಕೀಯ ದಾಳ ಆಗಿರುವ ಇಡಿ, ಐಟಿ(IT), ಸಿಬಿಐ ಸಂಸ್ಥೆಗಳಿಗೆ ಧಿಕ್ಕಾರ, ಚುನಾಯಿತ ಸರ್ಕಾರ ಬುಡಮೇಲು ಇಡಿ ಅಸ್ತ್ರ ಬಳಸುತ್ತಿರುವ ಕೇಂದ್ರ ಬಿಜೆಪಿ ಸರ್ಕಾರಕ್ಕೆ ಧಿಕ್ಕಾರ ಎಂದು ಬರೆದಿರುವ ಪ್ಲೇ ಕಾರ್ಡ್ ಹಿಡಿದುಕೊಂಡು ಪ್ರತಿಭಟನೆ ನಡೆಸಲಾಯಿತು.