ಲೇಖಕ ಪ್ರಸಾದ್ ಟಿ.ಎಂ ಅವರ ‘ಅಪ್ಪ ಹೇಳಿದ ಕಥೆಗಳು’ ಎನ್ನುವ ಕೃತಿಯ ಕುರಿತು ಮೈಸೂರಿನ ಹಿರಿಯ ಲೇಖಕರು, ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ ಪುರಸ್ಕೃತರಾದ ಡಾ.ಭೇರ್ಯ ರಾಮಕುಮಾರ್ ಅವರು ಮಾಡಿದ ಕಿರು ಪರಿಚಯ ಇಲ್ಲಿದೆ.
ಕುಟುಂಬದಲ್ಲಿ ಮನೆಯೇ ಮೊದಲ ಪಾಠಶಾಲೆ. ತಾಯಿಯೇ ಮೊದಲ ಗುರು. ಆದರೆ ತಂದೆ ಮಗುವಿಗೆ ಉತ್ತಮ ಮಾರ್ಗ ದರ್ಶಕ. ಮುಗ್ಧ ಮನಸ್ಸಿನ ಮಗುವಿಗೆ ತಂದೆಯೇ ಮೊದಲ ಹೀರೋ. ಮಗು ತನ್ನ ತಂದೆಯನ್ನು ಅನುಕರಿಸಲು ಪ್ರತಿಕ್ಷಣವೂ ಬಯಸುತ್ತದೆ. ಇಂತಹ ತಂದೆ ಮಗುವಿಗೆ ಸಣ್ಣ ಜನಪದ ಕತೆಗಳ ಮೂಲಕ ಜೀವನ ಮೌಲ್ಯಗಳನ್ನು ಅರಿವು ಮೂಡಿಸಬೇಕು. ಲೇಖಕ ಪ್ರಸಾದ್.ಟಿ.ಎಂ ಅವರು ತಮ್ಮ ತಂದೆಯವರಾದ ಮಹದೇವಪ್ಪನವರು ಬಾಲ್ಯದಿಂದಲೂ ತಮಗೆ ಹೇಳಿದ ನೀತಿ ಪ್ರಚೋದಕ, ಜೀವನ ಮೌಲ್ಯ ರೂಪಿಸುವ ಸುಮಾರು 33 ಕಥೆಗಳನ್ನು ಇಲ್ಲಿ ಕಟ್ಟಿಕೊಟ್ಟಿದ್ದಾರೆ.
ಪ್ರಸಾದ್ ಅವರು ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಕುಂದೂರು ಬಳಿಯ ತೆಂಕಹಳ್ಳಿ ಗ್ರಾಮದವರು. ವೃತ್ತಿಯಲ್ಲಿ ಸಾಫ್ಟವೇರ್ ಇಂಜನೀಯರ್. ತಮ್ಮ ಊರಿನಲ್ಲಿ ಇರುವ ಜಮೀನಿನಲ್ಲಿ ಸಾವಯವ ಕೃಷಿ ನಡೆಸಿದ್ದಾರೆ. ಈಗಾಗಲೇ ‘ಸುಲಭ ಸಾವಯವ ಕೃಷಿ’ (ಲೇಖನಗಳ ಸಂಕಲನ), ‘ಅಪ್ಪ ಹೇಳಿದ ಕಥೆಗಳು ಜಾನಪದ ಕತೆಗಳ’ (ಸಂಕಲನ), ‘ದೇವರನ್ನು ಶಪಿಸಲಿಲ್ಲ ದೇವರಾದರು’ (ಲೇಖನ ಸಂಕಲನ) ಪ್ರಕಟಿಸುವ ಮೂಲಕ ಕನ್ನಡ ಸಾಹಿತ್ಯ ಕ್ಷೇತ್ರಕ್ಕೂ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.
ಪ್ರಸಾದ್ ಅವರು ತಮ್ಮ ಕೃತಿಯಲ್ಲಿ ತಮ್ಮೂರಿನ ಜನಪದ ಕಲಾವಿದರ ಬಗ್ಗೆ ತಿಳಿಸಿರುವುದನ್ನು ನೋಡಿದಾಗ ಹಿಂದಿನ ಘಟನೆಗಳು ಜ್ಞಾಪಕಕ್ಕೆ ಬರುತ್ತವೆ. ಅಪ್ಪ ಹೇಳಿದ ಕತೆಗಳು ಕೃತಿಯ ವಿಶೇಷವೆಂದರೆ ಇವುಗಳು ಜನಜೀವನಕ್ಕೆ ಹತ್ತಿರವಾದ ಕತೆಗಳು. ಪ್ರತಿಯೊಂದು ಕಥೆಯ ಅಂತ್ಯದಲ್ಲಿ ಸಮಾಜಕ್ಕೆ ಒಂದು ವಿಶೇಷವಾದ ಸಂದೇಶವಿದೆ. ಹಣ್ಣಿನ ವ್ಯಾಪಾರಿಯ ಕತೆಯಲ್ಲಿ ಹಣ್ಣಿನ ವ್ಯಾಪಾರಿ ಪ್ರತಿ ಕ್ಷಣವೂ ತನ್ನ ಹಣ್ಣಿನ ವ್ಯಾಪಾರ ಅಭಿವೃದ್ಧಿ ಪಡಿಸಲು ಶ್ರಮಪಟ್ಟನೇ ವಿನಃ ತನ್ನ ವೈಯಕ್ತಿಕ ಬದುಕಿನ ಬಗ್ಗೆ ಯೋಚಿಸಲಿಲ್ಲ. ತನಗಾಗಿ ಒಂದು ಹಣ್ಣು ತಿನ್ನಲೂ ಬಿಡುವಿರಲಿಲ್ಲ. ಇಂದಿನ ಸಮಾಜದಲ್ಲಿ ಬಹುತೇಕರ ಪರಿಸ್ಥಿತಿ ಇದೇ ಆಗಿದೆ. ಹಣ, ಅಧಿಕಾರ, ಅಂತಸ್ತು ಪಡೆಯಲು ಜೀವನವಿಡೀ ಶ್ರಮಪಡುವ ವ್ಯಕ್ತಿಗಳಿಗೆ ಎಲ್ಲಾ ಸಾಧಿಸುವ ವೇಳೆಗೆ ವಯಸ್ಸಾಗಿರುತ್ತದೆ. ಹಲವು ಕಾಯಿಲೆಗಳಿಂದ ಕೂಡಿರುತ್ತಾರೆ. ಜೀವನ ಬೇಸರ ಎನಿಸುತ್ತದೆ. ಈ ಕಥೆ ನಮ್ಮ ಪ್ರಗತಿಯ ಜೊತೆಗೆ ನಮ್ಮನ್ನು ನಂಬಿದವರಿಗೂ ಸಮಯ ಮೀಸಲಿಡಬೇಕು ಎಂಬ ನೀತಿ ಸೂಚಿಸುತ್ತದೆ.
ಮಕ್ಕಳ ಭವಿಷ್ಯ ರೂಪಿಸಲು ಅಪ್ಪ ಅಮ್ಮ ನಿರಂತರವಾಗಿ ಶ್ರಮಪಡುತ್ತಾರೆ. ತಾವು ಹಸಿದು ಬಳಲಿದರೂ ಮಗು ಹಸಿವು ಎಂದು ಅಳಲು ಬಿಡುವುದಿಲ್ಲ. ತನ್ನ ಮಗ ಅಥವಾ ಮಗಳು ಸಮಾಜದಲ್ಲಿ ಗಣ್ಯ ವ್ಯಕ್ತಿಯಾಗಬೇಕು. ಉತ್ತಮ ಬಾಳುವೆ ನಡೆಸಬೇಕು. ಉತ್ತಮ ನೈತಿಕ ಬುನಾದಿ ಹೊಂದಬೇಕು ಎನ್ನುವುದು ಪ್ರತಿ ತಂದೆ ತಾಯಿಯ ಕನಸು. ಪ್ರಸಾದ್ ಅವರ ತಂದೆ ಮಗುವಿಗೆ ಉತ್ತಮ ಚಿಂತನೆ, ನೈತಿಕತೆ ಬದುಕಿನ ಸುಭದ್ರ ತಳಹದಿ ರೂಪಿಸುವ ಸಲುವಾಗಿ ಹೇಳಿರುವ ಜನಪದ ಕತೆಗಳು ಓದುಗರ ಮನಸೆಳೆಯುತ್ತವೆ ಜೊತೆಗೆ ಅವರಲ್ಲಿ ಜಾಗೃತಿ ಮೂಡಿಸುತ್ತವೆ.
ಬದುಕಿನಲ್ಲಿ ಅವರವರ ಕಷ್ಟ ಅವರವರಿಗೆ. ಆನೆಗೆ ಆನೆಯದೇ ಕಷ್ಟ. ಜೀವನವಿಡೀ ಕಷ್ಟ ಎದುರಿಸಿದ ರೈತನೊಬ್ಬ ತನ್ನ ಕಷ್ಟ ಪರಿಹರಿಸಲು ಕೋರಲು ಕೈಲಾಸಕ್ಕೆ ತೆರಳುತ್ತಾನೆ. ಅಲ್ಲಿ ಈಶ್ವರನ ಬಳಿ ತನ್ನ ಬದುಕಿನ ಕಷ್ಟ ಎಲ್ಲವನ್ನೂ ಹೇಳಿ, ಈ ಕಷ್ಟಗಳನ್ನು ನಿವಾರಣೆ ಮಾಡಬೇಕೆಂದು ಕೋರುತ್ತಾನೆ. ಎಲ್ಲವನ್ನೂ ಆಲಿಸಿದ ಈಶ್ವರ ತನ್ನ ಕಷ್ಟಗಳ ಪಟ್ಟಿ ಕೊಡುತ್ತಾನೆ. ಎಲ್ಲರಿಗೂ ಅವರದೇ ಆದ ರೀತಿಯ ಕಷ್ಟಗಳಿವೆ. ಆ ಕಷ್ಟಗಳನ್ನು ಎದುರಿಸಿ ಬದುಕಬೇಕೆ ವಿನಃ ದೇವರನ್ನು, ಅನ್ಯರನ್ನು ಅದಕ್ಕಾಗಿ ಟೀಕಿಸಬಾರದು ಎಂಬ ನೀತಿ ಈ ಕಥೆಯಲ್ಲಿ ಅಡಕವಾಗಿದೆ. ಹೀಗೆ ಇಲ್ಲಿರುವ 33 ಕಥೆಗಳು ತುಂಬಾ ವಿಶೇಷವಾಗಿವೆ. ಆಸಕ್ತರು ಪುಸ್ತಕ ಖರೀದಿಸಲು ಲೇಖಕರನ್ನು ಸಂಪರ್ಕಿಸಿ(6363172368).