ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ತಾಲೂಕಿನ ಬನ್ನೆಟ್ಟಿ ಪಿ.ಎ ಗ್ರಾಮದಲ್ಲಿ ಸೋಮವಾರ ಮುಂಜಾನೆ ನಡೆದ ಬಸ್ ಅಪಘಾತದಲ್ಲಿ(Bus Accident) ಮೃತಪಟ್ಟ ವಿದ್ಯಾರ್ಥಿ ಸಂದೀಪ ಹರಿಜನಗೆ ನ್ಯಾಯ ಸಿಗಬೇಕೆಂದು ಆಗ್ರಹಿಸಿ ಎಬಿವಿಪಿ ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು. ಎಬಿವಿಪಿ(ABVP) ಸಿಂದಗಿ ಘಟಕದಿಂದ ಪ್ರತಿಭಟನೆ ನಡೆಸಲಾಯಿತು. ಮೃತ ವಿದ್ಯಾರ್ಥಿ ಸಂದೀಪ ಪಟ್ಟಣದ ಹೆಚ್.ಜಿ ಹೈಸ್ಕೂಲ್ ನಲ್ಲಿ ಓದುತ್ತಿದ್ದ. ಹೀಗಾಗಿ ಆ ಶಾಲೆಯ ವಿದ್ಯಾರ್ಥಿಗಳು ಬಸವೇಶ್ವರ ಸರ್ಕಲ್ ತನಕ ಪ್ರತಿಭಟನಾ ಮೆರವಣಿಗೆ ನಡೆಸಿ ಘಟನೆಯನ್ನು ಖಂಡಿಸಿದರು.
ವಿದ್ಯಾರ್ಥಿ(Student) ಸಾವಿಗೆ ಬಸ್ ಚಾಲಕ, ನಿರ್ವಾಹಕ ಕಾರಣವೆಂದು ಧಿಕ್ಕಾರ ಕೂಗಲಾಯಿತು. ಅವರನ್ನು ಅಮಾನತು ಮಾಡಬೇಕೆಂದು ಆಗ್ರಹಿಸಲಾಯಿತು. ಅಲ್ಲದೇ ಸರ್ಕಾರದಿಂದ ಮೃತ ವಿದ್ಯಾರ್ಥಿ ಕುಟುಂಬಕ್ಕೆ 25 ಲಕ್ಷ ರೂಪಾಯಿ ಪರಿಹಾರ(Compensation) ನೀಡಬೇಕು ಅನ್ನೋದು ಸೇರಿದಂತೆ ವಿವಿಧ ಬೇಡಿಕೆಗಳೊಂದಿಗೆ ತಹಶೀಲ್ದಾರ್ ಪ್ರದೀಪಕುಮಾರ ಹಿರೇಮಠ ಅವರಿಗೆ ಮನವಿ ಸಲ್ಲಿಸಿದರು.
ಸಿಂದಗಿ ಬಸ್ ಡಿಪೋ ಮ್ಯಾನೇಜರ್ ಪರವಾಗಿ ಮನವಿ ಸ್ವೀಕರಿಸಿದ ಸಿಬ್ಬಂದಿ ನಾಗಾವಿ ಅವರು, ಸಾರಿಗೆ ಇಲಾಖೆಯಿಂದ 10 ಲಕ್ಷ ರೂಪಾಯಿ ಪರಿಹಾರ ಸಿಗುತ್ತೆ. ಈಗಾಗ್ಲೇ 50 ಸಾವಿರ ರೂಪಾಯಿ ನೀಡಲಾಗಿದೆ. ಉಳಿದ ಹಣವನ್ನು ನೀಡಲಾಗುತ್ತೆ ಎಂದು ತಿಳಿಸಿದ್ದಾರೆ. ಈ ವೇಳೆ ಎಬಿವಿಪಿ ಸಿಂದಗಿ ನಗರ ಸಹ ಕಾರ್ಯದರ್ಶಿ ರವಿ ರೆಬಿನಾಳ, ತಾಲೂಕು ಸಂಚಾಲಕ ವಿಶಾಲ ನಾಯ್ಕೋಡಿ, ಎಸ್ಎಫ್ ಡಿ ಪ್ರಮುಖ ಸಾಗರ ರೆಬಿನಾಳ, ನಗರ ಪ್ರಮುಖ ನಿಂಗರಾಜ ಪೂಜಾರ, ಹೋರಾಟ ಪ್ರಮುಖ ಮುತ್ತು ತಳವಾರ, ಸಾಮಾಜಿಕ ಜಾಲತಾಣ ಪ್ರಮುಖ ಆಕಾಶ ಬಿರಾದಾರ, ಕಾರ್ಯಕರ್ತ ಪ್ರಕಾಶ ಅಗಸರ ಸೇರಿದಂತೆ ಇತರರು ಭಾಗವಹಿಸಿದ್ದರು.