ಪ್ರಜಾಸ್ತ್ರ ಸುದ್ದಿ
ಕನ್ನಡದ ರಿಯಾಲಿಟಿ ಶೋಗಳಲ್ಲಿ ಬಿಗ್ ಬಾಸ್ ಸಹ ಒಂದು. ಸಿನಿಮಾ ಸೇರಿದಂತೆ ಬೇರೆ ಬೇರೆ ಕ್ಷೇತ್ರದವರನ್ನು ಆಯ್ಕೆ ಮಾಡಿ ಮೂರು ತಿಂಗಳ ಕಾಲ ಶೋ ಮಾಡಲಾಗುತ್ತೆ. ಕಳೆದ 10 ವರ್ಷಗಳಿಂದ ನಟ ಕಿಚ್ಚ ಸುದೀಪ್ ಕಾರ್ಯಕ್ರಮ ನಿರೂಪಣೆ ಮಾಡಿಕೊಂಡು ಬಂದಿದ್ದಾರೆ. 11ನೇ ಸೀಸನ್ ಅವರು ಮಾಡಲ್ಲ ಎನ್ನಲಾಗುತ್ತಿತ್ತು. ಕೊನೆಗೆ ಸುದೀಪ್ ನಿರೂಪಣೆ ಮುಂದುವರೆಸಿದರು. ಇದೀಗ ಬಿಗ್ ಬಾಸ್ ಶೋ ನಿರೂಪಣೆಗೆ ಗುಡ್ ಬೈ ಹೇಳಿದ್ದಾರೆ. ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಬಿಗ್ ಬಾಸ್ 11ರ ಸೀಸನ್ ತನಕ ನನಗೆ ನೀಡಿದ ಜವಾಬ್ದಾರಿಗೆ ಬೆಂಬಲ ನೀಡಿದ್ದಕ್ಕೆ ಧನ್ಯವಾದಗಳು. ಕಾರ್ಯಕ್ರಮದ ಟಿವಿಆರ್ ನಂಬರ್ ನೋಡಿದರೆ ತಿಳಿಯುತ್ತೆ, ನನಗೆ ಹಾಗೂ ಕಾರ್ಯಕ್ರಮಕ್ಕೆ ನೀವು ಎಷ್ಟೊಂದು ಬೆಂಬಲ ನೀಡಿದ್ದೀರಿ ಎಂದು. 11 ವರ್ಷಗಳ ಕಾಲ ನಾವೆಲ್ಲ ಒಟ್ಟಿಗೆ ಪ್ರಯಾಣ ಮಾಡಿದ್ದೇವೆ. ನಾನು ಮಾಡಬೇಕು ಎಂದುಕೊಂಡಿದ್ದೆನೋ ಅದಕ್ಕೆ ಈಗ ಸಮಯ ಬಂದಿದೆ. ಇದು ನನ್ನ ನಿರೂಪಣೆಯ ಕೊನೆಯ ಶೋ. ನನ್ನ ನಿರ್ಧಾರವನ್ನು ಕಲರ್ಸ್ ವಾಹಿನಿಯವರು, ಇಷ್ಟು ವರ್ಷಗಳ ಕಾಲ ಬೆಂಬಲಿಸುತ್ತಿರುವ ನೀವು ನಂಬುತ್ತೀರಿ ಎಂದುಕೊಂಡಿದ್ದೇನೆ. ಈ ಸೀಸನ್ ಖಂಡಿತು ಅತ್ಯುತ್ತಮವಾಗಿರುತ್ತೆ ಎಂದು ನಾನು ಅಂದುಕೊಂಡಿದ್ದೇನೆ. ಎಲ್ಲ ಸ್ಪರ್ಧಾಳುಗಳಿಗೆ ಶುಭವಾಗಲಿ. ಪ್ರತಿಯೊಬ್ಬರಿಗೂ ಧನ್ಯವಾದಗಳು ಎಂದಿದ್ದಾರೆ.