ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaluru): ದಿವಂಗತ ಡಾ.ವಿಷ್ಣುವರ್ಧನ್ ಅವರ ಸಮಾಧಿ ನೆಲಸಮ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಚಿತ್ರರಂಗದ ಬೆರಳೆಣಿಕೆಯಷ್ಟು ಜನರು ಇದರ ಬಗ್ಗೆ ಮಾತನಾಡಿದ್ದಾರೆ. ಇದೀಗ ನಟ ಸುದೀಪ್ ಅವರು ವಿಷ್ಣುವರ್ಧನ್ ದರ್ಶನ ಕೇಂದ್ರ ನಿರ್ಮಾಣ ಮಾಡಲು ಅರ್ಧ ಎಕರೆ ಜಾಗ ಖರೀದಿಸಲಿದ್ದಾರೆ ಎಂದು ಡಾ.ವಿಷ್ಣು ಸೇನಾ ಸಮಿತಿಯ ವೀರಕಪುತ್ರ ಶ್ರೀನಿವಾಸ್ ಹೇಳಿದ್ದಾರೆ.
ಈ ಬಗ್ಗೆ ಮಾಧ್ಯಮಗೋಷ್ಠಿ ಮಾತನಾಡಿರುವ ಅವರು, ಅಭಿಮಾನ್ ಸ್ಟುಡಿಯೋದಿಂದ ಮೂರ್ನಾಲ್ಕು ಕಿಲೋ ಮೀಟರ್ ದೂರಲ್ಲಿ ಅರ್ಧ ಎಕರೆ ಜಾಗವನ್ನು ಸುದೀಪ್ ಖರೀದಿಸಲಿದ್ದಾರೆ. ಸೆಪ್ಟೆಂಬರ್ 2ರಂದು ಅವರ ಜನ್ಮದಿನದಂದು ಕೇಂದ್ರದ ಮಾದರಿ ಹೇಗಿರಲಿದೆ ಎಂದು ಬಿಡುಗಡೆ ಮಾಡಲಾಗುವುದು. ಸೆಪ್ಟೆಂಬರ್ 18ಕ್ಕೆ ಅಡಿಗಲ್ಲು ಹಾಕುತ್ತೇವೆ. ವಿಷ್ಣುವರ್ಧನ್ ಅವರ ಜನ್ಮದಿನ ಆಚರಣೆ ಮಾಡಲು ಬೆಂಗಳೂರಲ್ಲಿ ಜಾಗವಿಲ್ಲ. ಪರ್ಯಾವಾಗಿ ಒಂದು ಕೇಂದ್ರ ಮಾಡುತ್ತಿದ್ದು, ಒಂದು ವರ್ಷದೊಳಗೆ ಪೂರ್ಣಗೊಳ್ಳಲಿದೆ.
ಮೈಸೂರಲ್ಲಿರುವ ಸ್ಮಾರಕಕ್ಕೆ ಅದರದೆಯಾದ ಘನತೆ, ಗೌರವ ಇದೆ. ದರ್ಶನ ಕೇಂದ್ರ ಅದಕ್ಕೆ ಸಮವೆಂದು ಹೇಳುವುದಿಲ್ಲ. ಅಭಿಮಾನಿಗಳಿಂದಲೇ ಈ ದರ್ಶನ ಕೇಂದ್ರ ನಿರ್ಮಾಣವಾಗಲಿದೆ. 25 ಅಡಿ ಎತ್ತರದ ವಿಷ್ಣುವರ್ಧನ್ ಪುತ್ಥಳಿ, ಗ್ರಂಥಾಲಯ ಇರಲಿದೆ. ಇನ್ನು ಇಡೀ ಅಭಿಮಾನ್ ಸ್ಟುಡಿಯೋ ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು. ಅದನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಆಗ್ರಹಿಸಿ ಹೋರಾಟ ಮಾಡುವ ತೀರ್ಮಾನ ಮಾಡಲಾಗಿದೆ ಎಂದು ಹೇಳಿದ್ದಾರೆ.