ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಸಧ್ಯ ರಾಜ್ಯ ರಾಜಕೀಯದಲ್ಲಿ ಚರ್ಚೆಯಲ್ಲಿರುವುದು ಆಡಳಿತರೂಢ ಕಾಂಗ್ರೆಸ್ ಹಾಗೂ ವಿಪಕ್ಷಗಳಾದ ಬಿಜೆಪಿ, ಜೆಡಿಎಸ್ ನಾಯಕರ ಅಕ್ರಮಗಳ ಆರೋಪ, ಪ್ರತ್ಯಾರೋಪ. ಅದರಲ್ಲೂ ಡಿಸಿಎಂ ಡಿ.ಕೆ ಶಿವಕುಮಾರ್(DK Shivakumar), ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ(HDK) ನಡುವೆ ನೂರಾರು ಕೋಟಿ ರೂಪಾಯಿಗಳ ಅಕ್ರಮ ಆಸ್ತಿ ಸಂಪಾದನೆ ಆರೋಪ ಮಾಡುತ್ತಿದ್ದಾರೆ. ನೀನು ಎಷ್ಟು ಕೋಟಿ ಸಂಪಾದನೆ ಮಾಡಿದ್ಯಾ, ನೀನು ಎಷ್ಟು ಕೋಟಿ ಲೂಟಿ ಮಾಡಿದ್ಯಾ ಎಂದು ಏಕವಚನದಲ್ಲೇ ಮಾತಿಗೆ ಮಾತುಗಳು ಕೇಳಿ ಬರುತ್ತಿವೆ. ಇದೆಲ್ಲದರ ನಡುವೆ ಸಾರ್ವಜನಿಕರಿಗೆ ಕಾಡುತ್ತಿರುವುದು, ರಾಜಕಾರಣಗಳು ಇಷ್ಟೊಂದು ಬಹಿರಂಗವಾಗಿ ನೂರಾರು ಕೋಟಿಯಷ್ಟು ಅಕ್ರಮ ಆಸ್ತಿ ಸಂಪಾದನೆ ಮಾಡಿದ್ದಾರೆ ಎಂದು ಹೇಳುತ್ತಿದ್ದರೂ ಯಾವುದೇ ಕಾನೂನು ಪ್ರಯೋಗ ಇವರ ಮೇಲೆ ಯಾಕೆ ಆಗುತ್ತಿಲ್ಲ ಎನ್ನುವುದು.
ಹೆಚ್.ಡಿ ಕುಮಾರಸ್ವಾಮಿ ಕುಟುಂಬ, ಸಂಬಂಧಿಕರು ಸೇರಿ ಯಾರೆಲ್ಲ ಎಷ್ಟು ಅಕ್ರಮ ಆಸ್ತಿ ಸಂಪಾದನೆ ಮಾಡಿದ್ದಾರೆ ಅನ್ನೋದು ಬಿಚ್ಚಿಡ್ತೀನಿ ಎಂದು ಡಿ.ಕೆ ಶಿವಕುಮಾರ್ ಹೇಳಿದರೆ.. ಡಿ.ಕೆ ಶಿವಕುಮಾರ್ ಮೂವರು ವಿಧುವೆಯರಿಗೆ ಹೆದರಿಸಿ ಮಗಳ ಹೆಸರಿಗೆ ಆಸ್ತಿ ಬರೆಸಿಕೊಂಡಿದ್ದಾರೆ. ಯಾರನ್ನು ಬೆದರಸಿ ಜಮೀನುಗಳನ್ನು ಬರೆಸಿಕೊಂಡಿದ್ದಾರೆ ಎನ್ನುವುದೆಲ್ಲವೂ ಗೊತ್ತು ಎಂದು ಹೆಚ್ಡಿಕೆ ಹೇಳುತ್ತಾರೆ. ಇಲ್ಲಿ ಇಬ್ಬರು ಅಕ್ರಮ ಮಾಡಿದ್ದಾರೆ ಎಂದು ಸಾವಿರಾರು ಜನರ ಎದುರೆ ಹೇಳುತ್ತಿರುವಾಗ ನಮ್ಮಲ್ಲಿರುವ ಕಾನೂನು, ಇದನ್ನು ನೋಡಿಕೊಳ್ಳಬೇಕಾಗಿರುವ ಅಧಿಕಾರಿಗಳು ಯಾಕೆ ಇಷ್ಟೊಂದು ವೀಕ್ ಎನ್ನುವುದು ಗೊತ್ತಾಗುತ್ತಿಲ್ಲ.
ರಾಜಕೀಯಕ್ಕೆ ಬರುವುದೇ ಅಕ್ರಮವಾಗಿ ಆಸ್ತಿ ಸಂಪಾದನೆ ಮಾಡಲು, ಅಧಿಕಾರ ಅನುಭವಿಸಲು ಎನ್ನುಷ್ಟರ ಮಟ್ಟಿಗೆ ಬಂದು ನಿಂತಿದೆ. ಗ್ರಾಮ ಪಂಚಾಯ್ತಿ ಸದಸ್ಯನಿಂದ ಹಿಡಿದು ಪಾರ್ಲಿಮೆಂಟ್ ಸದಸ್ಯರವರೆಗೂ ಅಕ್ರಮದ ವಾಸನೆ ಕೇಳಿ ಬರುತ್ತೆ. ಅದನ್ನು ಬಚಾವ್ ಮಾಡಲು ಪಿಡಿಒನಿಂದ ಹಿಡಿದು ಉನ್ನತ ಮಟ್ಟದ ಅಧಿಕಾರಿಗಳು ಸಹ ಇವರೊಂದಿಗೆ ಇರುತ್ತಾರೆ. ಹೀಗಾಗಿ ಸಾಮಾನ್ಯ ಜನರು ಒಂದಿಂಚು ಭೂಮಿ ಆಚೆಇಚೆ ಮಾಡಿದರೆ ಕೇಸ್ ಹಾಕುವುದು. ದಂಡ ಕಟ್ಟಿಸಿಕೊಳ್ಳುವುದು. ಅದನ್ನು ತೆರವುಗೊಳಿಸುವುದು ಮಾಡಲಾಗುತ್ತೆ. ಇಲ್ಲಿ ನೋಡಿದರೆ ನೂರಾರು ಎಕರೆ ಜಮೀನು, ನೂರಾರು ಕೋಟಿ ರೂಪಾಯಿ ಆಸ್ತಿ ಅಕ್ರಮವೆಂದು ಗಂಭೀರ ಆರೋಪ ಮಾಡಿದರೂ ಸುಮೋಟೊ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಲು ಆಗುತ್ತಿಲ್ಲ.
ಇನ್ನೊಂದು ಕಡೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ(Yatnal) ಯತ್ನಾಳ ತಮ್ಮದೆ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, ಅವರ ತಂದೆ ಮಾಜಿ ಸಿಎಂ ಯಡಿಯೂರಪ್ಪ(BSY) ಸೇರಿ ಅನೇಕರ ವಿರುದ್ಧ ಅಕ್ರಮದ ಆರೋಪಗಳ ಸುರಿಮಳೆಯನ್ನೇ ಸುರಿಸುತ್ತಾರೆ. ನಿತ್ಯ ಮಾಧ್ಯಮಗಳ ಮುಂದೆ ಬಂದು ಗಂಭೀರ ಸ್ವರೂಪದ ಆರೋಪಗಳನ್ನು ಮಾಡುತ್ತಲೇ ಇರುತ್ತಾರೆ. ಆದರೂ ಯಾವುದೇ ಕೇಸ್, ತನಿಖೆ ಇಲ್ಲ. ಇವತ್ತು ಗ್ರಾಮ ಪಂಚಾಯ್ತಿ ಪಿಡಿಒ ಆಗಿ ಕೆಲಸಕ್ಕೆ ಸೇರಿ ಎರಡ್ಮೂರು ವರ್ಷದಲ್ಲೇ ಲಕ್ಷಾಂತರದಿಂದ ಕೋಟ್ಯಾಂತರ ರೂಪಾಯಿ ಅಕ್ರಮ ಆಸ್ತಿ ಗಳಿಕೆ ಮಾಡ್ತಿರುವವರನ್ನೇ ಏನೂ ಮಾಡಲು ಆಗದಿರುವಾಗ ಇಡೀ ರಾಜಕೀಯ ಶಕ್ತಿಯನ್ನೇ ಹೊಂದಿರುವವರನ್ನು ಸಂಬಂಧಪಟ್ಟ ಅಧಿಕಾರಿಗಳು ಏನು ಮಾಡಲು ಸಾಧ್ಯ? ಅವರ ಧೈರ್ಯ, ಶೌರ್ಯ, ಖಡಕ್, ಪ್ರಮಾಣಿಕ ಎನ್ನುವುದು ಬರೀ ಬಡವ, ಮಧ್ಯಮ ವರ್ಗದವರ ಮೇಲೆ ಮಾತ್ರ ಅನ್ನೋದು ಸತ್ಯ.