ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ರಾಜಕೀಯದಿಂದ ನಿವೃತ್ತಿ ಪಡೆಯುವ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿರುವ ಹೇಳಿಕೆಗೆ ಬಿಜೆಪಿ ಶಾಸಕ ವಿ.ಸುನೀಲ್ ಕುಮಾರ್ ಟಾಂಟ್ ಕೊಟ್ಟಿದ್ದಾರೆ. ಕರ್ನಾಟಕ ರಾಜಕೀಯ ರಂಗ ಕಂಡ ಯೂಟರ್ನ್ ರಾಜಕಾರಣಿ ಅಂದರೆ ಸಿದ್ದರಾಮಯ್ಯ ಎಂದು ಟೀಕಿಸಿದ್ದಾರೆ. ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, 2013ರಲ್ಲಿ ಕೊನೆ ಚುನಾವಣೆ ಎಂದವರು 2018ರಲ್ಲಿ ಯೂಟರ್ನ್ ತೆಗೆದುಕೊಂಡಿರಿ. 2023ರಲ್ಲಿ ರಾಜಕೀಯ ನಿವೃತ್ತಿ ಬಗ್ಗೆ ಮಾತನಾಡಿ, ಈಗ ಮತ್ತೆ ಸಕ್ರಿಯ ರಾಜಕಾರಣದಲ್ಲಿ ಇರುತ್ತೇನೆ ಎಂದು ದೊಡ್ಡ ಯೂಟರ್ನ್ ಹಾಕಿದ್ದೀರಿ ಎಂದಿದ್ದಾರೆ.
ರಾಜಕೀಯ ನಿಮ್ಮ ವೈಯಕ್ತಿಕ ನಿಲುವು. ಆದರೆ, ಛದ್ಮವೇಷವಾಗದಂತೆ, ಮುಖವಾಡ ಧರಿಸುವುದು ಆಗದಂತೆ ನೋಡಿಕೊಳ್ಳುವುದು ಸಾರ್ವಜನಿಕರ ಬದುಕಿನಲ್ಲಿ ಇರುವವರ ಜವಾಬ್ದಾರಿಯೂ ಹೌದಲ್ಲವೋ ಎಂದು ಪ್ರಶ್ನಿಸಿದ್ದಾರೆ. ಎರಡು ಬಹಿರಂಗವಾಗಿ ಸಕ್ರಿಯ ರಾಜಕಾರಣದ ನಿವೃತ್ತಿ ಬಗ್ಗೆ ಘೋಷಿಸಿದ್ದೀರಿ. ರಾಜಕೀಯ ಜೀವನದಲ್ಲಿ ಈ ಮಟ್ಟದಲ್ಲಿ ಸುಳ್ಳು ಹೇಳಿ ದಕ್ಕಿಸಿಕೊಳ್ಳಬಹುದು ಎಂಬುವುದನ್ನು ನಿಮ್ಮನ್ನು ನೋಡಿ ಕಲಿಯಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ.