ಪ್ರಜಾಸ್ತ್ರ ಸುದ್ದಿ
ರಾಮನಗರ(Ramanagara): ಕಳೆದ ಜೂನ್ 24ರಂದು ಚನ್ನಪಟ್ಟ ತಾಲೂಕಿನ ಮಾಕಳಿ ಗ್ರಾಮ ಪಂಚಾಯ್ತಿ ಸದಸ್ಯೆ ಪತಿ ಲೋಕೇಶ್(38) ಅನುಮಾನಸ್ಪದ ರೀತಿಯಲ್ಲಿ ಮೃತಪಟ್ಟಿದ್ದರು. ಈ ಬಗ್ಗೆ ಪತ್ನಿ ಮಾಧ್ಯಮಗೋಷ್ಠಿ ನಡೆಸಿ ಪತಿ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಳು. ಆದರೆ, ಸುಪಾರಿ ಕೊಟ್ಟು ಪತಿಯನ್ನು ಪತ್ನಿಯೇ ಹತ್ಯೆ ಮಾಡಿದ್ದಾಳೆ ಅನ್ನೋ ಸತ್ಯ ಇದೀಗ ಬಯಲಿಗೆ ಬಂದಿದೆ. ಹೀಗಾಗಿ ಆರೋಪಿ ಪತ್ನಿ ಚಂದ್ರಕಲಾಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕೃಷ್ಣಾಪುರದೊಡ್ಡಿ ಗ್ರಾಮದಲ್ಲಿ ಲೋಕೇಶ್ ಶವ ಪತ್ತೆಯಾಗಿತ್ತು. ಪಕ್ಕದಲ್ಲಿ ವಿಷದ ಬಾಟಲ್ ಇಡಲಾಗಿತ್ತು. ಈ ಮೂಲಕ ಆತ್ಮಹತ್ಯೆ ಎಂದು ಬಿಂಬಿಸಲಾಗಿತ್ತು. ಈ ಬಗ್ಗೆ ಕೆ.ಎಂ ದೊಡ್ಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ತನಿಖೆ ಪ್ರಾರಂಭಿಸಿದರು. ನಿಧಾನವಾಗಿ ಅದು ಪತ್ನಿಯ ಕಡೆ ಬಂದಿದೆ. ಆಕೆಯ ಫೋನ್ ಕಾಲ್ ಚಂದ್ರಕಲಾಳ ಕಳ್ಳಾಟ ಬಯಲು ಮಾಡಿದೆ.
ಯೋಗೇಶ್ ಎಂಬಾತನ ಜೊತೆಗೆ ಚಂದ್ರಕಲಾ ಅಕ್ರಮ ಸಂಬಂಧ ಹೊಂದಿದ್ದು, ಇದಕ್ಕೆ ಅಡ್ಡಿಯಾದ ಪತಿಯನ್ನು ಮುಗಿಸಲು ಬೆಂಗಳೂರು ಮೂಲದ ನಾಲ್ವರು ಸುಪಾರಿ ಕಿಲ್ಲರ್ ಗಳಿಗೆ ಹೇಳಿದ್ದಳಂತೆ. ಈಗ ಆರೋಪಿ ಚಂದ್ರಕಲಾ ಪೊಲೀಸರ ಅತಿಥಿಯಾಗಿದ್ದು, ಉಳಿದವರ ಶೋಧ ಕಾರ್ಯ ನಡೆಸಲಾಗುತ್ತಿದೆ. ಅಕ್ರಮ ಸಂಬಂಧಕ್ಕೆ ಒಂದಲ್ಲ ಒಂದು ಹತ್ಯೆ ನಡೆಯುತ್ತಿರುವುದು ನಿಜಕ್ಕೂ ಆತಂಕಕಾರಿಯಾಗಿದೆ.