ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಮುಡಾ(Muda Scam) ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ತನಿಖೆಗೆ ಹೈಕೋರ್ಟ್ ಅನುಮತಿ ನೀಡಿರುವುದರಿಂದ ರಾಜ್ಯ ರಾಜಕೀಯದಲ್ಲಿ ದೊಡ್ಡ ಜಟಾಪಟಿ ಶುರುವಾಗಿದೆ. ಬಿಜೆಪಿ(BJP) ಸಿಎಂ ರಾಜೀನಾಮೆಗೆ ಆಗ್ರಹಿಸುತ್ತಿದೆ. ಆದರೆ, ಕಾಂಗ್ರೆಸ್ ನಾಯಕರು, ಸಚಿವರು ಮುಖ್ಯಮಂತ್ರಿ ಬೆನ್ನಿಗೆ ನಿಂತಿದ್ದಾರೆ. ಅವರು ಯಾವುದೇ ತಪ್ಪು ಮಾಡಿಲ್ಲ ಎನ್ನುವ ಮಾತುಗಳು ಪುನರ್ ಉಚ್ಛರಿಸುತ್ತಿದ್ದಾರೆ. ಇನ್ನು ಸಿಎಂ ಕಾನೂನು ಹೋರಾಟಕ್ಕೆ ಸಂಬಂಧಿಸಿದಂತೆ ತಜ್ಞರೊಂದಿಗೆ ಸಮಾಲೋಚನೆ ನೀಡಿದ್ದಾರೆ.
ಮುಡಾ ನಿವೇಶನ ಹಂಚಿಕೆಯಲ್ಲಿ ಮುಖ್ಯಮಂತ್ರಿಗಳು ಯಾವುದೇ ಪಾತ್ರವಿಲ್ಲ. ಇದರಲ್ಲಿ ಅವರು ತಪ್ಪು ಮಾಡಿಲ್ಲ. ಆರೋಪ ಮುಕ್ತರಾಗಿ ಹೊರ ಬರುತ್ತಾರೆ ಎನ್ನುವ ವಿಶ್ವಾಸವಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ(DKS) ಶಿವಕುಮಾರ್ ಹೇಳಿದ್ದಾರೆ. ಇದರಲ್ಲಿ ಏನಾದರೂ ತಪ್ಪು ನಡೆದಿದ್ದರೆ ಅಧಿಕಾರಿಗಳು ಮಾಡಿರಬೇಕು. ಅದರ ಬಗ್ಗೆ ನನಗೆ ಗೊತ್ತಿಲ್ಲ. ಆದರೆ, ಇದರಲ್ಲಿ ಮುಖ್ಯಮಂತ್ರಿಗಳ ಕೈವಾಡ ಇಲ್ಲವೆಂದು ಹೇಳುತ್ತೇನೆ ಅಂತಾ ಡಿಸಿಎಂ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಗೃಹ ಸಚಿವ(G.Parameshwar) ಜಿ.ಪರಮೇಶ್ವರ್ ಮಾತನಾಡಿ, ಮುಖ್ಯಮಂತ್ರಿಗಳು ರಾಜೀನಾಮೆ ನೀಡುವ ವಿಚಾರವಾಗಿ ಪಕ್ಷದಲ್ಲಿಯೂ ಯಾವುದೇ ಒತ್ತಡವಿಲ್ಲ. ಈ ಬಗ್ಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಅವರು ಸಹ ಸ್ಪಷ್ಟವಾಗಿ ಹೇಳಿದ್ದಾರೆ. ಇನ್ನು ಹೈಕೋರ್ಟ್ ಆದೇಶ ಬಂದ ಬಳಿಕ ಅವರೇನು ವೀಕ್ ಆಗಿಲ್ಲ. ಕಲ್ಲುಬಂಡೆಯಂತೆ ಗಟ್ಟಿಯಾಗಿದ್ದಾರೆ. ಇಲ್ಲಿ ಕಾನೂನು ಹೋರಾಟಕ್ಕೆ ಅವಕಾಶ ಇರುವುದರಿಂದ ರಾಜೀನಾಮೆ ಪ್ರಶ್ನೆ ಇಲ್ಲ. ಹೈಕಮಾಂಡ್ ಸಹ ಸಿಎಂ ಬೆಂಬಲಕ್ಕೆ ಇದೆ ಎಂದರು. ಹೀಗೆ ಸಚಿವ ಸಂಪುಟದ ಸಹದ್ಯೋಗಿಗಳು ಸೇರಿದಂತೆ ಕೈ ಶಾಸಕರು, ನಾಯಕರು, ಹೈಕಮಾಂಡ್ ಕೂಡ ಮುಖ್ಯಮಂತ್ರಿಗಳ ಬೆನ್ನಿಗೆ ನಿಂತಿದೆ. ಬಿಜೆಪಿ, ಜೆಡಿಎಸ್ ಷಡ್ಯಂತ್ರದ ವಿರುದ್ಧ ಕಾನೂನು ಹೋರಾಟ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ.