ಪ್ರಜಾಸ್ತ್ರ ಸುದ್ದಿ
ನವದೆಹಲಿ(New Delhi): ಕರ್ನಲ್ ಸೋಫಿಯಾ ಖುರೇಷಿ ಅವರಿಗೆ ಅವಹೇಳನವಾಗುವ ರೀತಿಯಲ್ಲಿ ಹೇಳಿಕೆ ನೀಡಿದ್ದ ಮಧ್ಯಪ್ರದೇಶ ಬಿಜೆಪಿ ಸಚಿವ ವಿಜಯ್ ಶಾ ಕ್ಷಮೆಯಾಚನೆಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಸಚಿವರನ್ನು ಸೋಮವಾರ ತೀವ್ರ ತರಾಟೆ ತೆಗೆದುಕೊಂಡ ಕೋರ್ಟ್, ನೀವು ಯಾವ ರೀತಿ ಕ್ಷಮೆಯನ್ನು ಕೋರುತ್ತೀರಿ. ಅದಕ್ಕೂ ಒಂದು ಅರ್ಥವಿರುತ್ತದೆ. ಕಾನೂನಿನ ಪ್ರಕ್ರಿಯೆಯಿಂದ ತಪ್ಪಿಸಿಕೊಳ್ಳಲು ಸೌಮ್ಯ ಭಾಷೆ ಬಳಸುವುದು, ಮೊಸಳೆ ಕಣ್ಣೀರು ಹಾಕುವುದು ಎಂದು ಜಾಡಿಸಿದೆ.
ನ್ಯಾಯಮೂರ್ತಿ ಸೂರ್ಯಕಾಂತ್ ಅವರು ಸಚಿವ ಶಾ ಅವರ ಕ್ಷಮೆಯಾಚನೆಯನ್ನು ತಿರಸ್ಕರಿಸಿದರು. ಸಾರ್ವಜನಿಕರ ಜೀವನದಲ್ಲಿ ಇರುವ ನೀವು ಮಾತನಾಡುವಾಗ ಪದಗಳನ್ನು ತೂಗಿ ನೋಡಬೇಕು. ನಿಮ್ಮ ಮಾತಿನಿಂದ ಎಷ್ಟೊಂದು ಜನರ ಭಾವನೆಗಳು ಘಾಸಿಗೊಂಡಿವೆ ಎಂದು ನಿಮಗೆ ತಿಳಿದಿದೆಯೇ ಎಂದು ಪ್ರಶ್ನಿಸಿದರು. ಸಚಿವರ ಬಂಧನವನ್ನು ತಡೆಹಿಡಿದ ಕೋರ್ಟ್, ಸಚಿವರ ಹೇಳಿಕೆ ಸಂಬಂಧ ಮೂವರು ಐಪಿಎಸ್ ಅಧಿಕಾರಿಗಳ ನೇತೃತ್ವದ ತನಿಖಾ ತಂಡ ರಚನೆ ಮಾಡಿ ಆದೇಶಿಸಿದೆ.
ಆಪರೇಷನ್ ಸಿಂಧೂರ್ ಮೂಲಕ ಭಯೋತ್ಪಾದಕರಿಗೆ ಪಾಠ ಕಲಿಸಲಾಗಿದೆ. ಇದಕ್ಕೆ ಭಯೋತ್ಪಾಕದರ ಸಹೋದರಿಯನ್ನೇ ಕಳಿಸಲಾಗಿದೆ ಎಂದು ಕರ್ನಲ್ ಸೋಫಿಯಾ ಖುರೇಷಿ ಅವರ ವಿರುದ್ಧ ಅಗೌರವದಿಂದ ಮಾತನಾಡಿದ್ದರು. ಹೀಗಾಗಿ ಮಧ್ಯಪ್ರದೇಶ ಹೈಕೋರ್ಟ್ ಸಚಿವರ ವಿರುದ್ಧ ಎಫ್ಐಆರ್ ದಾಖಲಿಸಲು ಸೂಚಿಸಿತು. ಇದನ್ನು ಸುಪ್ರೀಂ ಕೋರ್ಟ್ ಸಮರ್ಥಿಸಿಕೊಂಡಿದೆ. ಸಚಿವ ವಿಜಯ್ ಶಾ ವಿರುದ್ಧ ದೇಶ್ಯಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಯಿತು.