ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ರೌಡಿ ಶೀಟರ್ ಬಿಕ್ಲು ಶಿವ ಹತ್ಯೆ ಪ್ರಕರಣದಲ್ಲಿ 5ನೇ ಆರೋಪಿಯಾಗಿರುವ ಬಿಜೆಪಿ ಶಾಸಕ ಭೈರತಿ ಬಸವರಾಜ ಅವರ ಜಾಮೀನು ಅರ್ಜಿ ಸುಪ್ರೀಂ ಕೋರ್ಟ್ ನಲ್ಲಿ ವಜಾ ಆಗಿದೆ. ಹೈಕೋರ್ಟ್ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗಿತ್ತು. ಆದರೆ, ಅದನ್ನು ವಜಾಗೊಳಿಸಲಾಗಿದೆ. ಬಂಧನ ಭೀತಿಯಿಂದ ತಲೆ ಮರೆಸಿಕೊಂಡಿದ್ದು, ಸಿಐಡಿ ತಂಡ ಬಂಧನಕ್ಕೆ ಬಲೆ ಬೀಸಿದೆ.
ಮಹಾರಾಷ್ಟ್ರದ ಸ್ಟಾರ್ ಹೋಟೆಲ್ ವೊಂದರಲ್ಲಿ ವಾಸ್ತವ್ಯ ಹೂಡಿರುವ ಬಗ್ಗೆ ಮಾಹಿತಿ ಸಿಕ್ಕಿದ್ದು, ಸಿಐಡಿ ತಂಡ ಅಲ್ಲಿಗೆ ತೆರಳಲಿದೆ. ಇನ್ನು ವಿದೇಶಕ್ಕೆ ಹೋಗದಂತೆ ಈಗಾಗ್ಲೇ ಲುಕ್ ಔಟ್ ನೋಟಿಸ್ ಜಾರಿ ಮಾಡಲಾಗಿದೆ. ಶಾಸಕರ ಪರವಾಗಿ ಮುಕುಲ್ ರೊಹಟಗಿ ಸುಪ್ರೀಂ ಕೋರ್ಟ್ ನಲ್ಲಿ ವಾದ ಮಂಡಿಸಿದರು. ಇದೊಂದು ಸಿವಿಲ್ ಮ್ಯಾಟರ್. ಅನಾವಶ್ಯಕವಾಗಿ ಇದರಲ್ಲಿ ಎಳೆದು ತರಲಾಗುತ್ತಿದೆ ಎಂದು ವಾದಿಸಿದರು.
ಲ್ಯಾಂಡ್ ಮಾಫಿಯಾ ರಾಜಕೀಯ ಶಕ್ತಿಯ ಮೇಲೆ ನಡೆಯುತ್ತಿದೆ ಅಲ್ಲವೇ ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ. ಅಲ್ಲದೆ ನಿಯಮಿತ ಜಾಮೀನು ಅರ್ಜಿ ಸಲ್ಲಿಸಲು ಸೂಚನೆ ನೀಡಿದೆ. ಒಟ್ಟಿನಲ್ಲಿ ಶಾಸಕ ಭೈರತಿ ಬಸವರಾಜ ಬಂಧನ ಆಗುವುದು ಖಚಿತವಾಗಿದೆ.




