ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ತಾಲೂಕಿನ ಸಿಂದಗಿ-ಕೊಡಂಗಲ್ ರಾಜ್ಯ ಹೆದ್ದಾರಿ-16ರ ಕಾಮಗಾರಿಗೆ ಸಂಬಂಧಸಿದಂತೆ ಶಾಸಕ ಅಶೋಕ ಮನಗೂಳಿಯವರು ಲೋಕೋಪಯೋಗಿ ಸಚಿವರ ಗಮನಕ್ಕೆ ಸೆಪ್ಟೆಂಬರ್ 9ರಂದು ತಂದಿದ್ದಾರೆ. 15 ಕಿಲೋ ಮೀಟರ್ ಉದ್ದದ ರಸ್ತೆ ಸುಧಾರಣೆ ಹಾಗೂ ಅಗಲೀಕರಣಕ್ಕೆ 29 ಕೋಟಿ ರೂಪಾಯಿಯ ಪ್ರಸ್ತಾವನೆಯನ್ನು ಸಲ್ಲಿಸಿದ್ದಾರೆ. ಶೀಘ್ರದಲ್ಲಿ ಕೆಲಸ ಶುರುವಾಗಲಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಪೂಜಾರಿ ಹೇಳಿದರು.
ಕಾಂಗ್ರೆಸ್ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹಹೊಳಿ ಅವರನ್ನು ಕಳೆದ ಆಗಸ್ಟ್ 24ರಂದು ಗೋಲಗೇರಿ ಭಾಗದ ಮೂಲಕ ಕರೆದುಕೊಂಡು ಬರುವ ಮೂಲಕ ರಸ್ತೆ ಪರಿಸ್ಥಿತಿ ಬಗ್ಗೆ ಅವರಿಗೆ ವಿವರಿಸಿದರು. ಆಗ ಸಚಿವರು ರಸ್ತೆ ಸುಧಾರಣೆ ಹಾಗೂ ಅಗಲೀಕರಣ ಬಗ್ಗೆ ಭರವಸೆ ನೀಡಿದರು. ಅದರಂತೆ ಶೀಘ್ರದಲ್ಲಿ 15 ಕಿಲೋ ಮೀಟರ್ ಉದ್ದದ ರಸ್ತೆ ಕೆಲಸ ನಡೆಯಲಿದೆ ಎಂದರು. ಈ ಬಗ್ಗೆ ಬಿಜೆಪಿಯವರು ಈಗ ರಸ್ತೆ ಬಂದ್ ಮಾಡಿ ಪ್ರತಿಭಟನೆ ಮಾಡುತ್ತೇವೆ ಎಂದು ಹೇಳುತ್ತಾರೆ. ಈ ಹಿಂದೆ 12 ವರ್ಷಗಳ ಕಾಲ ಶಾಸಕರಾಗಿದ್ದಾಗ ಅವರಿಗೆ ಇದು ಕಾಣಿಸಲಿಲ್ಲವಾ, ಬಿಜೆಪಿ ಮಂಡಲ ಅಧ್ಯಕ್ಷರು ಅದೇ ಮಾರ್ಗವಾಗಿ ತಮ್ಮ ಊರಿಗೆ ಹೋಗುತ್ತಾರೆ. ಆಗ ಅವರ ಕಣ್ಣಿಗೆ ಯಾಕೆ ಕಾಣಲಿಲ್ಲ. ಈಗ ಶಾಸಕರು ಎಲ್ಲ ರೀತಿಯ ಕೆಲಸ ಮಾಡಿದ್ದು, ಇನ್ನೇನು ಕೆಲಸ ಶುರುವಾಗಬೇಕಿದೆ. ಈಗ ಹೋರಾಟ ಮಾಡುತ್ತೇವೆ ಎನ್ನುತ್ತೀರಿ. ಎಲ್ಲೇ ಸಮಸ್ಯೆ ಇದ್ದರೂ ಅಲ್ಲಿ ಊಟಕ್ಕೆ ಕರೆಯಿರಿ ನಾನು ಬರುತ್ತೇನೆ. ಸಮಸ್ಯೆ ಬಗೆ ಹರಿಯುತ್ತೆ ಎಂದು ಮಾಜಿ ಶಾಸಕರು ಹೇಳುತ್ತಾರೆ. ಜನರು ಅವರಿಗೆ ಶಾಶ್ವತವಾಗಿ ವಿರೋಧ ಪಕ್ಷದ ಸ್ಥಾನದಲ್ಲಿ ಇರುವಂತೆ ಮಾಡಲಿ ಎಂದು ವಾಗ್ದಾಳಿ ನಡೆಸಿದರು.
ತಾಲೂಕಿನ ಜನರಿಗೆ ಶಾಶ್ವತವಾದ ಯೋಜನೆಗಳನ್ನು ನೀಡಬೇಕು ಎಂದು ನಮ್ಮ ಶಾಸಕರು ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ. ಯಾರು ಏನೇ ಹೇಳಿದರೂ ಐದು ವರ್ಷ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ನನ್ನ ತಾಲೂಕಿನ ಜನರ ಸಮಸ್ಯೆಗಳು ಏನಿವೆ. ಅದನ್ನು ಬಗೆಹರಿಸುವ ಕೆಲಸ ಮಾಡುವುದಷ್ಟೇ ನನ್ನ ಉದ್ದೇಶ ಎಂದಿದ್ದಾರೆ ಅಂತಾ ಹೇಳಿದರು. ಈ ವೇಳೆ ಎಪಿಎಂಸಿ ಅಧ್ಯಕ್ಷ ಕಲ್ಲಪ್ಪ ಬಿಸನಾಳ, ಆಶ್ರಯ ಸಮಿತಿ ಸದಸ್ಯ ಸಾಯಬಣ್ಣ ಪುರದಾಳ, ಪ್ರವೀಣ ಕಂಟಿಗೊಂಡ ಉಪಸ್ಥಿತರಿದ್ದರು.