Ad imageAd image

ಅಭಿವೃದ್ಧಿ ಬಗ್ಗೆ ಮಾಜಿ ಶಾಸಕರು ಬಹಿರಂಗ ಚರ್ಚೆಗೆ ಬರಲಿ: ಸುರೇಶ ಪೂಜಾರಿ

ಪಟ್ಟಣದಲ್ಲಿ ಅತಿಕ್ರಮಣ ಶೆಡ್ ಗಳ ತೆರವು ಕಾರ್ಯಾಚರಣೆ ವಿರುದ್ಧ ಬಿಜೆಪಿ ಯಾವ ಕಾರಣಕ್ಕೆ ಪ್ರತಿಭಟನೆ ಮಾಡಿತು ಎನ್ನುವ ಪ್ರಶ್ನೆ ಮೂಡಿದೆ.

Nagesh Talawar
ಅಭಿವೃದ್ಧಿ ಬಗ್ಗೆ ಮಾಜಿ ಶಾಸಕರು ಬಹಿರಂಗ ಚರ್ಚೆಗೆ ಬರಲಿ: ಸುರೇಶ ಪೂಜಾರಿ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಸಿಂದಗಿ(Sindagi): ಪಟ್ಟಣದಲ್ಲಿ ಅತಿಕ್ರಮಣ ಶೆಡ್ ಗಳ ತೆರವು ಕಾರ್ಯಾಚರಣೆ ವಿರುದ್ಧ ಬಿಜೆಪಿ ಯಾವ ಕಾರಣಕ್ಕೆ ಪ್ರತಿಭಟನೆ ಮಾಡಿತು ಎನ್ನುವ ಪ್ರಶ್ನೆ ಮೂಡಿದೆ. ಇವರು ಅಭಿವೃದ್ಧಿ ಪರವೋ, ವಿರುದ್ಧವೋ ಅನ್ನೋದು ತಿಳಿಯದಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಪೂಜಾರಿ ಪ್ರಶ್ನಿಸಿದರು. ಶನಿವಾರ ಪಕ್ಷದ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿದ ಅವರು, 13 ವರ್ಷಗಳ ತಮ್ಮ ಅವಧಿಯಲ್ಲಿ ಯಾರಿಗೂ ಅನ್ಯಾಯ ಮಾಡಿಲ್ಲಂತ ಮಾಜಿ ಶಾಸಕರು ಹೇಳಿದ್ದಾರೆ. ಅಂದರೆ ಅವರು ಏನು ಅಭಿವೃದ್ಧಿ ಮಾಡಿಲ್ಲ ಎಂದರ್ಥ. ಪುರಸಭೆ ನಡೆಸುತ್ತಿರುವ ಅನಧಿಕೃತ ಶೆಡ್ ಅಂಗಡಿಗಳ ತೆರವು ಕಾರ್ಯಾಚರಣೆ ಪಕ್ಷಕ್ಕೆ ಸಂಬಂಧವಿಲ್ಲ. ವಿನಾಃಕಾರಣ ಇದರಲ್ಲಿ ಪಕ್ಷ, ಶಾಸಕರು ಹೆಸರು ಎಳೆದು ತಂದಿರುವುದನ್ನು ಜನರು ಸಹ ಒಪ್ಪಲ್ಲ ಎಂದರು.

ಬಿಜೆಪಿ ಮಂಡಳ ಅಧ್ಯಕ್ಷರ ಊರಾದ ಗೋಲಗೇರಿಯಲ್ಲಿಯೇ ಎಷ್ಟೊಂದು ಕಾಮಗಾರಿಗಳಿಗೆ ಶಾಸಕರು ಚಾಲನೆ ಕೊಟ್ಟಿದ್ದಾರೆ ಅನ್ನೋದು ತಿಳಿದುಕೊಳ್ಳಲಿ. 17-18 ತಿಂಗಳ ಅವಧಿಯಲ್ಲಿ 88 ಕೋಟಿ ರೂಪಾಯಿ ಅನುದಾನ ತಂದು ಕೆಲಸ ಮಾಡಿಸುತ್ತಿದ್ದಾರೆ. ಬಸವೇಶ್ವರ ವೃತ್ತದ ಹತ್ತಿರ ವೇದಿಕೆ ಸಿದ್ಧವಾಗಲಿ. ಮಾಜಿ ಶಾಸಕರು 13 ವರ್ಷಗಳ ಸಾಧನೆ ಹೇಳಲಿ. ನಮ್ಮ ಶಾಸಕರು 17-18 ತಿಂಗಳ ಸಾಧನೆ ಹೇಳುತ್ತಾರೆ. ಪಟ್ಟಣ ಸೇರಿ ತಾಲೂಕಿನ ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡಬಾರದು. ಎರಡೂವರೆ ವರ್ಷ ಅವಧಿ ಆದ ಮೇಲೆ ಪುಸ್ತಕ ಬಿಡುಗಡೆ ಮಾಡಿ ತಾಲೂಕಿನ ಪ್ರತಿಯೊಬ್ಬರಿಗೂ ನಮ್ಮ ಕೆಲಸದ ಬಗ್ಗೆ ಮಾಹಿತಿ ನೀಡುತ್ತೇವೆ ಎಂದ ಅವರು ಹಲವು ಯೋಜನೆಗಳು, ಕಾಮಗಾರಿಗಳ ವಿವರ ನೀಡಿದರು.

ಕಾಂಗ್ರೆಸ್ ಮುಖಂಡರಾದ ಎಂ.ಎ ಖತೀಬ್ ಮಾತನಾಡಿ, ಊರಿನ ಅಭಿವೃದ್ಧಿಗಾಗಿ ತ್ಯಾಗ ಮಾಡಬೇಕಾಗುತ್ತೆ. ನಿಜವಾಗಿಯೂ ಅನ್ಯಾಯಕ್ಕೆ ಒಳಗಾದವರಿಗೆ ಅನುಕೂಲ ಮಾಡಿಕೊಡಲು ಶಾಸಕರು ಸಿದ್ಧರಿದ್ದಾರೆ ಎಂದರು. ಕಾಂಗ್ರೆಸ್ ಯುವ ಮುಖಂಡ ಮಹಮ್ಮದ್ ಪಟೇಲ್ ಮಾತನಾಡಿ, ವಾರದಿಂದ ತೆರವು ಕೆಲಸ ನಡೆದಿದೆ. ಬಸ್ ನಿಲ್ದಾಣ, ಕೋರ್ಟ್ ಸರ್ಕಲ್ ಕಡೆ ತೆರವು ಮಾಡುವಾಗ ಬಿಜೆಪಿಯವರು ಎಲ್ಲಿ ಹೋಗಿದ್ದರು. ಇಲ್ಲಿ ತಮ್ಮವರ ನಾಲ್ಕು ಅಂಗಡಿಗಾಗಿ ಪ್ರತಿಭಟನೆ ಮಾಡಿದ್ದಾರೆ ಎಂದರು. ಪುರಸಭೆ ಮಾಜಿ ಸದಸ್ಯ ರಾಜಶೇಖರ ಕೂಚಬಾಳ ಮಾತನಾಡಿ, ಶಾಸಕರ ಅಭಿವೃದ್ಧಿ ಕನಸಿಗೆ ಪುರಸಭೆಯವರು ಬದ್ಧರಾಗಿದ್ದಾರೆ. ವಿಜಯಪುರ ಜಿಲ್ಲೆಯಲ್ಲಿ ಎಲ್ಲೆಡೆ ತೆರವು ಕೆಲಸ ನಡೆದಿದ್ದು, ನಮ್ಮಲ್ಲಿಯೇ ತಡವಾಯಿತು. ಶೆಡ್ ನಿರ್ಮಿಸಿಕೊಂಡವರು ಬೀದಿಬದಿ ವ್ಯಾಪಾರಿಗಳಾಗುವುದಿಲ್ಲ. ಪುರಸಭೆಯಲ್ಲಿ ಬೀದಿಬದಿ ವ್ಯಾಪಾರಿಗಳಿಗೆ ಕಾರ್ಡ್ ನೀಡಲಾಗಿರುತ್ತೆ. ಶಾಸಕರ ವಿರುದ್ಧ ಮಾತನಾಡಿದ್ದು ಬಾಲಿಶವಾದದ್ದು ಎಂದರು. ಬಿಜೆಪಿಯವರು ತಾತ್ವಿಕವಾಗಿ, ಸೈದ್ಧಾಂತಿಕವಾಗಿ ವಿರೋಧ ಮಾಡಲಿ. ಅಭಿವೃದ್ಧಿ ವಿಚಾರದಲ್ಲಿ ವಿರೋಧ ಮಾಡುವುದು ಸರಿಯಲ್ಲ ಎಂದು ಸುರೇಶ ಮಳಲಿ ಹೇಳಿದರು. ಈ ವೇಳೆ ಜಿಲ್ಲಾ ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಮಲ್ಲಣ್ಣ ಸಾಲಿ, ಸೋಮನಗೌಡ ಬಿರಾದಾರ, ಖಾದರ್ ಬಂಕಲಗಿ, ಕುಮಾರ ದೇಸಾಯಿ ಸೇರಿ ಇತರರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article