ಜಾಸ್ತ್ರ ಸುದ್ದಿ
ಧಾರವಾಡ(Dharwad): ವಿದ್ಯಾಕಾಶಿಯಲ್ಲಿ ನಿಜಕ್ಕೂ ಒಂದು ನಿಗೂಢ(Mysterious Death) ಸಾವು ಪ್ರಕರಣ ಬೆಳಕಿಗೆ ಬಂದಿದೆ. ಕಾಣೆಯಾಗಿದ್ದಾನೆ ಎಂದು ದೂರು ಬಂದ ಹಿನ್ನಲೆಯಲ್ಲಿ ಪೊಲೀಸರು, ಆ ವ್ಯಕ್ತಿಯನ್ನು ಹುಡುಕಿಕೊಂಡು ಹೋದರೆ ಅವರಿಗೆ ಅಚ್ಚರಿಕೆ ಕಾದಿತ್ತು. ಯಾವ ವ್ಯಕ್ತಿಯನ್ನು ಪತ್ತೆ ಹಚ್ಚಲು ಹೋಗಿದ್ದರೂ ಆತ ಅದಾಗಲೇ ಸುತ್ತು ಹೋಗಿದ್ದು ಮಾತ್ರವಲ್ಲ ಅಸ್ಥಿಪಂಜರದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಇಂತಹದೊಂದು ಘಟನೆ ನಡೆದಿದ್ದು ಧಾರವಾಡದ ಕೆನರಾ ಬ್ಯಾಂಕ್ ಹತ್ತಿರ ನಡೆದಿದೆ. ಚಂದ್ರಶೇಖರ್ ಕೊಲ್ಲಾಪುರ(47) ನಿಗೂಢವಾಗಿ ಮೃತಪಟ್ಟ ವ್ಯಕ್ತಿಯೆಂದು ಹೇಳಲಾಗುತ್ತಿದೆ.
ಪತ್ನಿ, ಮಕ್ಕಳಿಲ್ಲದ ಚಂದ್ರಶೇಖರ್ ಕೋವಿಡ್(Covid) 2ನೇ ಅಲೆಯ ಸಂದರ್ಭದಲ್ಲಿ ಕಾಣೆಯಾಗಿದ್ದಾರೆ. ಮನೆಗೆ ಹೊರಗಡೆಯಿಂದ ಬೀಗ ಹಾಕಿದ್ದರಿಂದ ಸಂಬಂಧಿಕರು ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಕಾಣೆಯಾಗಿರುವ ದೂರು ಕೊಟ್ಟಿದ್ದರು. ಈ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದರೂ ಪತ್ತೆಯಾಗಿರಲಿಲ್ಲವಂತೆ. ಚಂದ್ರಶೇಖರ ಅವರ ಮೊಬೈಲ್ ಲೋಕೇಶನ್ ಟ್ರ್ಯಾಕ್ ಮಾಡಿದಾಗ, ಲೋಕೇಶನ್ ಮನೆಯ ಕಡೆಗೆ ತೋರಿಸಿದೆ. ಹೀಗಾಗಿ ಸಂಬಂಧಿಕರನ್ನು ಕರೆದುಕೊಂಡು ಮನೆಯತ್ತ ಹೊರಟ ಪೊಲೀಸರು, ಮನೆಗೆ ಹಾಕಿದ್ದ ಬೀಗ ಒಡೆದು ಒಳ ಪ್ರವೇಶಿಸಿದ್ದಾರೆ. ಆಗ ಮನೆ ಆವರಣದ ಬೆಡ್ ಮೇಲೊಂದು ಮಲಗಿದ ಸ್ಥಿತಿಯಲ್ಲಿ ಅಸ್ತಿಪಂಜರ ಪತ್ತೆಯಾಗಿದೆ. ಇದನ್ನು ನೋಡಿದ ಎಲ್ಲರಿಗೂ ಶಾಕ್.
ಮನೆಯಲ್ಲಿ ಔಷದೋಪಚಾರದ ವಸ್ತುಗಳು, ಸಲಾಯಿನ್ ಕೂಡ ಹಚ್ಚಿದ್ದು ಹಾಗೇ ಬಿದ್ದಿದೆ. ಕೋವಿಡ್ 2 ಅಲೆಯಲ್ಲಿ ಅನಾರೋಗ್ಯದಿಂದ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಸದ್ಯಕ್ಕೆ ಅಸ್ಥಿಪಂಜರವನ್ನು ಕಿಮ್ಸಗೆ ರವಾನಿಸಲಾಗಿದೆ. ಈ ಪರೀಕ್ಷೆಯ ಬಳಿಕ ಸಾವಿನ ನಿಖರ ಕಾರಣ ತಿಳಿದು ಬರಲಿದ್ದು, ಈ ಕುರಿತಂತೆ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಒಟ್ಟಿನಲ್ಲಿ ಈ ನಿಗೂಢ ಸಾವಿನ ಸುತ್ತ ಅನುಮಾನದ ಹುತ್ತ ಬೆಳೆದಿದೆ.