ಪ್ರಜಾಸ್ತ್ರ ಸುದ್ದಿ
ಹಾವೇರಿ(Haveri): ಸ್ವಾತಿ ಬ್ಯಾಡಗಿ ಎನ್ನುವ ಯುವತಿ ಕೊಲೆ ಪ್ರಕರಣ ಸಂಬಂಧ ಹಲಗೇರಿ ಠಾಣೆ ಪೊಲೀಸರು ಇಬ್ಬರನ್ನು ಬಂಧಿಸಿದ್ದು, ಬಂಧಿತರ ಸಂಖ್ಯೆ 3ಕ್ಕೆ ಏರಿಕೆಯಾಗಿದೆ. ಮೊದಲ ಆರೋಪಿ ನಯಾಜ್ ಎಂಬಾತನನ್ನು ಈಗಾಗ್ಲೇ ಬಂಧಿಸಲಾಗಿದೆ. ಹಾವೇರಿ ಜಿಲ್ಲೆ ರಟ್ಟಿಹಳ್ಳಿ ತಾಲೂಕಿನ ಮಾಸೂರು ಗ್ರಾಮದ ಸ್ವಾತಿ, ನಯಾಜ್ ಎಂಬಾತನನ್ನು ಪ್ರೀತಿಸುತ್ತಿದ್ದಳಂತೆ. ಕಳೆದ ಮಾರ್ಚ್ 3ರಂದು ಇವರನ್ನು ಭೇಟಿಯಾಗಲು ಹೋದಾಗ ಜಗಳ ನಡೆದಿದ್ದು, ಕೊಲೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಮಗಳು ಕಾಣೆಯಾದ ಬಗ್ಗೆ ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮಾರ್ಚ್ 6ರಂದು ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಪತ್ತೇಪೂರ ಗ್ರಾಮದ ತುಂಗಭದ್ರಾ ನದಿ ಹತ್ತಿರ ಸ್ವಾತಿ ಶವ ಪತ್ತೆಯಾಗಿದೆ. ಮರಣೋತ್ತರ ಪರೀಕ್ಷೆಯಲ್ಲಿ ಇದು ಕೊಲೆ. ಸಹಜ ಸಾವಲ್ಲ ಎಂದು ತಿಳಿದು ಬಂದಿದೆ. ಇದರ ಜಾಡು ಹಿಡಿದು ಹೊರಟ ಪೊಲೀಸರಿಗೆ ಸ್ವಾತಿ, ನಯಾಜ್ ಎನ್ನುವ ಯುವಕನನ್ನು ಪ್ರೀತಿಸುತ್ತಿದ್ದಳು ಅನ್ನೋದು ತಿಳಿದು ಬಂದಿದೆ.
ಈ ಘಟನೆ ಇದೀಗ ಲವ್ ಜಿಹಾದ್ ಸ್ವರೂಪ ಪಡೆದುಕೊಂಡಿದೆ. ಹಿಂದೂಪರ ಸಂಘಟನೆಗಳು ಇದನ್ನು ಖಂಡಿಸಿದ್ದು, ಜಸ್ಟೀಸ್ ಫಾರ್ ಸ್ವಾತಿ ಎನ್ನುವ ಅಭಿಯಾನ ಶುರು ಮಾಡಿದ್ದಾರೆ. ಸ್ವಾತಿ ತಂದೆ ತೀರಿಕೊಂಡಿದ್ದು, ತಾಯಿ ಜೊತೆ ವಾಸವಾಗಿದ್ದಳು. ಈಗ ಮಗಳನ್ನು ಸಹ ಕಳೆದುಕೊಂಡು ತಾಯಿ ಒಂಟಿಯಾಗಿದ್ದಾಳೆ. ಯುವತಿಯನ್ನು ಕೊಂದ ಹಂತಕರಿಗೆ ಕಠಿಣ ಶಿಕ್ಷೆ ಕೊಡಬೇಕೆಂದು ಆಗ್ರಹಿಸಲಾಗಿದೆ.