ಪ್ರಜಾಸ್ತ್ರ ಸುದ್ದಿ
ಚೆನ್ನೈ(Chennai): ತಮಿಳು ಖ್ಯಾತ ನಟ ವಿಶಾಲ್ ವೈರಲ್ ಜ್ವರದಿಂದ ಬಳಲುತ್ತಿದ್ದು ಇಂದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಲ್ಲಿನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಕುರಿತು ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್ ಮೂಲಕ ತಿಳಿಸಿದ್ದು, ಕೆಲ ಕಾಲ ಅವರಿಗೆ ವಿಶ್ರಾಂತಿ ಬೇಕು. ವೈದ್ಯರ ನಿರೀಕ್ಷೆಯಲ್ಲಿದ್ದಾರೆ ಎಂದು ತಿಳಿಸಲಾಗಿದೆ. ಆದರೆ, ಅವರ ಅಭಿಮಾನಿಗಳು ಸಾಕಷ್ಟು ಗಾಬರಿಯಾಗಿದ್ದಾರೆ.
ವಿಶಾಲ್ ನಟನೆಯ ಮದಗಜರಾಜ ಚಿತ್ರದ ಪ್ರಮೋಷನ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ಮಾತನಾಡುವಾಗ ಅವರ ಕೈ ಸಂಪೂರ್ಣ ನಡುಗುತ್ತಿತ್ತು. ಮಾತನಾಡುವಾಗಲೂ ತಡವರಿಸುತ್ತಿದ್ದರು. ದೈಹಿಕವಾಗಿಯೂ ಸಾಕಷ್ಟು ಸೊರಗಿರುವುದು ಕಂಡು ಬಂದಿದೆ. ಇದರಿಂದಾಗಿ ಅವರನ್ನು ನೋಡಿದ ಎಲ್ಲರಿಗೂ ಶಾಕ್ ಆಗಿದೆ. ಮದಗಜರಾಜ ಸಿನಿಮಾ ಬರೋಬ್ಬರಿ 13 ವರ್ಷಗಳ ಹಿಂದೆ ಮಾಡಲಾಗುತ್ತಿದೆ. ಹಲವಾರು ಕಾರಣಗಳಿಂದ ಸಿನಿಮಾ ಪೂರ್ತಿ ಮಾಡಲು ಆಗಲಿಲ್ಲ. ದಶಕಗಳ ಹಿಂದೆ ಸಿನಿಮಾದ ಹಾಡು, ಟ್ರೇಲರ್, ಫಸ್ಟ್ ಲುಕ್ ಬಿಡುಗಡೆ ಮಾಡಲಾಗಿದೆ.
ಇದೀಗ ಜನವರಿ 12, 2025ರಂದು ಸಿನಿಮಾ ರಿಲೀಸ್ ಆಗುತ್ತಿದೆ. ವಿಶಾಲ್, ಅಂಜಲಿ, ವರಲಕ್ಷ್ಮಿ ಶರತಕುಮಾರ್ ಲೀಡ್ ರೋಲ್ ಮಾಡಿದ್ದಾರೆ. ಸುಂದರ್.ಸಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ನಟ ವಿಶಾಲ್ ಬೇಗ ಗುಣಮುಖರಾಗಲಿ ಎಂದು ಅಭಿಮಾನಿಗಳು, ಹಿತೈಷಿಗಳು ಹಾರೈಸಿದ್ದಾರೆ. ಆದಷ್ಟು ಬೇಗ ಹುಷಾರಾಗಿ ಬಂದು ಎಂದಿನಂತೆ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ.