ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ಜಿಲ್ಲೆಯ ವಕ್ಫ್ ಆಸ್ತಿಗೆ ಸಂಬಂಧಿಸಿದಂತೆ(Waqf Property Issue) ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಟಾಸ್ಕ್ಪೋರ್ಸ್ ಸಮಿತಿಯೊಂದನ್ನು ರಚಿಸಿ, 1964 ರಿಂದ 1974ರವರೆಗಿನ ದಾಖಲೆಗಳನ್ನು ಪರಿಶೀಲಿಸಿ ಅಗತ್ಯ ಕ್ರಮ ವಹಿಸುವಂತೆ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ(M.B Patil) ಸೂಚಿಸಿದರು. ನಗರದ ಸೋಲಾಪುರ ರಸ್ತೆಯಲ್ಲಿರುವ ಸಚಿವರ ಗೃಹ ಕಚೇರಿಯಲ್ಲಿ ಜಿಲ್ಲೆಯ ವಿವಿಧ ತಹಶೀಲ್ದಾರರು, ವಕ್ಫ್ ಅಧಿಕಾರಿಗಳು ಸೇರಿದಂತೆ ವಿವಿಧ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ವಿಜಯಪುರ ಜಿಲ್ಲೆಯಾದ್ಯಂತ ರೈತರು(Farmers) ಸೇರಿದಂತೆ ಖಾಸಗಿ ಜಮೀನುಗಳ ಪೈಕಿ ಒಂದು ಎಕರೆಯೂ ಸಹ ವಕ್ಫ್ಗೆ ಸೇರಿಸಿಲ್ಲ. 1974ರ ಗೆಜೆಟ್ ನೋಟಿಫಿಕೇಶನ್ ಪ್ರಕಾರ ವಕ್ಫ್ ಆಸ್ತಿ ಮಾತ್ರ ಇಂದೀಕರಣ ಮಾಡಲಾಗುತ್ತಿದ್ದು, ಈ ಕುರಿತು ಅನಾವಶ್ಯಕವಾಗಿ ಗೊಂದಲ ಸೃಷ್ಟಿಸಲಾಗುತ್ತಿದೆ. ಎಲ್ಲ ಗೊಂದಲಕ್ಕೆ ಅಂತ್ಯ ಹಾಡಲು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಟಾಸ್ಕ್ ಸಮಿತಿ ರಚಿಸಿಕೊಂಡು 1964 ರಿಂದ 1974ರವರೆಗಿನ ದಾಖಲೆಗಳನ್ನು ಪರಿಶೀಲಿಸಿ ಅಗತ್ಯ ಕ್ರಮ ವಹಿಸುವಂತೆ ಅವರು ಸೂಚನೆ ನೀಡಿದರು.
1974ರಲ್ಲಿ ಹೊರಡಿಸಲಾದ ಗೆಜೆಟ್ ನೋಟಿಫಿಕೇಶನ್‌ನಲ್ಲಿ(Notification) ನಗರದಲ್ಲಿರುವ ಖಾಜಾ ಅಮೀನ ದರ್ಗಾ ಸರ್ವೇ ನಂಬರ್ ಹೊನವಾಡ ಗ್ರಾಮದ ಆಸ್ತಿ ಎಂದು ನಮೂದಾಗಿರುವುದರಿಂದ ವಕ್ಫ್ ಮಂಡಳಿಯಿಂದ 1977ರಲ್ಲಿ ಬದಲಾವಣೆ ಮಾಡಿ ಸರಿಪಡಿಸಿದೆ. ಹೊನವಾಡ ಗ್ರಾಮದ ಯಾರಿಗೂ ನೋಟಿಸ್ ಈವರೆಗೆ ಜಾರಿ ಮಾಡಿರುವುದಿಲ್ಲ. ಸಂಬಂಧಿಸಿದ ರೈತರ, ಮಾಲೀಕರ ಹೆಸರಿನಲ್ಲಿಯೇ ಜಮೀನುಗಳು ಇವೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದಾಗ ಗೆಜೆಟ್ ನೋಟಿಫಿಕೇಶನ್‌ಗಿಂತ ಮುಂಚಿತವಾಗಿ 1964 ರಿಂದ 1974ರವರೆಗಿನ ದಾಖಲೆಗಳನ್ನು ಪರಿಶೀಲಿಸಿ ಸರಿಪಡಿಸಿ ಕ್ರಮ ವಹಿಸುವಂತೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಿಂದ ಇವರೆಗೆ 124 ನೋಟಿಸ್ ನೀಡಲಾಗಿದೆ. ಇಂಡಿ(Indi) ತಾಲೂಕಿಗೆ ಸಂಬಂಧಿಸಿದಂತೆ ತಹಶೀಲ್ದಾರರು ನೋಟಿಸ್ ನೀಡದೆಯೇ 41 ಆಸ್ತಿಗಳ ಇಂದೀಕರಣ ಕುರಿತು ಉಪವಿಭಾಗಾಧಿಕಾರಿಗಳು ಸುಮೋಟೋ ಪ್ರಕರಣವೆಂದು ಪರಿಗಣಿಸಿ ಅಗತ್ಯ ಕ್ರಮ ವಹಿಸಬೇಕು. ಸಿಂದಗಿಯ(Sindagi) ವಿರಕ್ತಮಠದ ಆಸ್ತಿ ಸರ್ವೇ ನಂ.1029 ಬದಲಿಗೆ 1020 ಆಗಿದ್ದು, ಈ ಕುರಿತು ಅಗತ್ಯ ಕ್ರಮ ವಹಿಸಿ ಸರಿಪಡಿಸುವಂತೆ ಅವರು ಸೂಚನೆ ನೀಡಿದರು. ಯಾರೂ ತಮ್ಮ ಆಸ್ತಿ, ಜಮೀನುಗಳ ಬಗ್ಗೆ ಆತಂಕ ಪಡುವ ಅವಶ್ಯಕತೆ ಇಲ್ಲವೆಂದು ಜನರಲ್ಲಿ ತಿಳುವಳಿಕೆ ಮೂಡಿಸುವಂತೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ವೇಳೆ ಜಿಲ್ಲಾಧಿಕಾರಿ ಟಿ.ಭೂಬಾಲನ್, ವಿಜಯಪುರ ಉಪ ವಿಭಾಗಾಧಿಕಾರಿ ಗುರುನಾಥ ದಡ್ಡೆ, ಇಂಡಿ ಉಪವಿಭಾಗಾಧಿಕಾರಿ ಆಬೀದ ಗದ್ಯಾಳ, ವಿಜಯಪುರ ತಹಶೀಲ್ದಾರ ಪ್ರಶಾಂತ ಚನಗೊಂಡ, ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ, ವಕ್ಫ್ ಇಲಾಖೆ ಅಧಿಕಾರಿ ತಬಸ್ಸುಮ್ ಎಂ.ಮೊಹಸೀನ್ ಜಮಖಂಡಿ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.