ಪ್ರಜಾಸ್ತ್ರ ಸುದ್ದಿ
ಮುಂಬೈ(Mumbai): ಐಸಿಸಿ ಮಹಿಳಾ ವಿಶ್ವಕಪ್ ಟೂರ್ನಿಯ ಸೆಮಿ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡ ಭರ್ಜರಿ ಗೆಲುವು ಸಾಧಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ. ಜೆಮಿಮಾ ರಾಡ್ರಿಗಸ್ ಭರ್ಜರಿ ಶತಕ ಸಿಡಿಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದ್ದಾರೆ. ಮಹಿಳಾ ತಂಡ ಚೊಚ್ಚಲ ವಿಶ್ವಕಪ್ ಎತ್ತಿ ಹಿಡಿಯಲು ಇನ್ನೊಂದು ಮೆಟ್ಟಿಲು ಬಾಕಿ ಇದೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡ 49.5 ಓವರ್ ಗಳಲ್ಲಿ 338 ರನ್ ಗಳಿಗೆ ಆಲೌಟ್ ಆಯ್ತು. ಫೋಬೆ ಲಿಚ್ ಫಿಲ್ಡ್ ಭರ್ಜರಿ 119, ಪೆರ್ರಿ 77, ಎಸ್ಲಗಾ 63 ರನ್ ಗಳಿಂದಾಗಿ ಕಾಂಗರೂ ಪಡೆ 300ರ ಗಡಿ ದಾಟಿತು. ಭಾರತ ಪರ ದೀಪ್ತಿ ಶರ್ಮಾ, ನಾಲ್ಲಪುರೆಡ್ಡಿ ಚರಣಿ ತಲಾ 2 ವಿಕೆಟ್ ಪಡೆದರು. ಕ್ರಾಂತಿಗೌಡ, ರಾಧಾ ಯಾದವ್, ಅಮಜೋತ್ ಕೌರ್ ತಲಾ 1 ವಿಕೆಟ್ ಪಡೆದರು.
ಈ ಸ್ಕೋರ್ ಬೆನ್ನು ಹತ್ತಿದ ಭಾರತ ತಂಡ ಆರಂಭಿಕ ಆಘಾತ ಎದುರಿಸಿತು. 1.3 ಓವರ್ ಗಳಲ್ಲಿ 13 ರನ್ ಗಳಿಸಿದ್ದ ವೇಳೆ ಶಫಾಲಿ ವರ್ಮಾ 10 ರನ್ ಗೆ ಔಟ್ ಆದರು. ಮುಂದೆ ಸ್ಫೋಟಕ ಆಟಗಾರ್ತಿ ಸ್ಮೃತಿ ಮಂದಾನಾ ಸಹ 24 ರನ್ ಗೆ ಔಟ್ ಆಗಿ ನಿರಾಸೆ ಮೂಡಿಸಿದರು. ಆದರೆ, ಜೆಮಿಮಾ ರಾಡ್ರಿಗಸ್ ಹಾಗೂ ನಾಯಕಿ ಹರ್ ಪ್ರಿತ್ ಕೌರ್ ಜೋಡಿ ಭರ್ಜರಿ ಬ್ಯಾಟ್ ಬೀಸಿತು. 167 ರನ್ ಗಳ ಜೊತೆಯಾಟವಾಡಿತು. ಕೌರ್ 89 ರನ್ ಗೆ ಔಟ್ ಆದರು. ಇನ್ನೊಂದು ಬದಿಯಲ್ಲಿ ಜೆಮಿಯಾ ಗಟ್ಟಿಯಾಗಿ ನಿಂತಿದ್ದರು. ದೀಪ್ತಿ ಶರ್ಮಾ 24, ರಿಚಾ ಘೋಷ್ 26 ರನ್ ಗೆ ಔಟ್ ಆದರು. ಅಮೋಜ್ ಕೌರ್ ಅಜೇಯ 15 ಹಾಗೂ ಕೊನೆತನಕ ಆಡಿಯ ಜೆಮಿಮಾ ಅಜೇಯ 127 ರನ್ ಗಳಿಸಿ ದಾಖಲೆ ನಿರ್ಮಿಸಿದರು.
ಗೆಲುವಿನ ರನ್ ಬರುತ್ತಿದ್ದಂತೆ ಆಟಗಾರ್ತಿಯರು ಅಂಗಳಕ್ಕೆ ನುಗ್ಗಿ ಸಂಭ್ರಮಿಸಿದರು. ಈ ಗೆಲುವಿಗೆ ಕಾರಣರಾದ ಜೆಮಿಮಾ ಅವರನ್ನು ಎತ್ತಿ ಮುದ್ದಾಡಿದರು. ಕ್ರೀಡಾಂಗಣದ ತುಂಬ ಹರ್ಷೋದ್ಗಾರ ಜೋರಾಗಿತ್ತು. ಎಲ್ಲರೂ ಆಕೆಗೆ ಶುಭ ಕೋರಿದರು.



 
		 
		 
		
 
  
 
 
                     
                     
                     
                    