ಪ್ರಜಾಸ್ತ್ರ ಕ್ರೀಡಾ ಸುದ್ದಿ
ಟೀಂ ಇಂಡಿಯಾ(Team India) ಯುವ ಪಡೆ ಟಿ-20ಯಲ್ಲಿ ಸಜ್ಜಾಗುತ್ತಿದೆ. ಯುವ ಆಟಗಾರರು ರನ್ ಹೊಳೆ ಹರಿಸುವ ಮೂಲಕ ಭರವಸೆ ಮೂಡಿಸುತ್ತಿದ್ದಾರೆ. ಶ್ರೀಲಂಕಾ(Srilanka) ವಿರುದ್ಧ 3 ಟಿ-20 ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಗೆಲುವಿನ ನಗೆ ಬೀರಿದೆ. 43 ರನ್ ಗಳ ಅಂತರದಿಂದ ಶ್ರೀಲಂಕಾ ತಂಡವನ್ನು ಸೋಲಿಸಿ 1-0 ಮುನ್ನಡೆ ಸಾಧಿಸಿದೆ.
ಟಾಸ್ ಗೆದ್ದ ಶ್ರೀಲಂಕಾ ತಂಡದ ನಾಯಕ ಚರಿತಾ ಅಸಲಂಕಾ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಆದರೆ, ಟೀಂ ಇಂಡಿಯಾ ಆಟಗಾರರು ಭರ್ಜರಿ ಬ್ಯಾಟ್ ಬೀಸಿದರು. ನಾಯಕ ಸೂರ್ಯಕುಮಾರ್ ಯಾದವ್ 58, ರಿಷಬ್ ಪಂತ್ 49, ಯಶಸ್ವಿ ಜೈಸ್ವಾಲ್ 40, ಗಿಲ್ 34 ರನ್ ಗಳಿಂದಾಗಿ 7 ವಿಕೆಟ್ ನಷ್ಟಕ್ಕೆ 213 ರನ್ ಗಳಿಸಿದರು. ಲಂಕಾ ಪರ ಮತೀಶ್ ಪತಿರಾಣಾ 4 ಓವರ್ ಗಳಲ್ಲಿ 40 ರನ್ ಗಳಿಗೆ 4 ವಿಕೆಟ್ ಪಡೆದು ಮಿಂಚಿದರು. ಮಧುಶಂಕಾ, ಫ್ರೆನಂಡೊ, ಹಸರಂಗಾ ತಲಾ 1 ವಿಕೆಟ್ ಪಡೆದರು.
ನಂತರ ಬ್ಯಾಟ್ ಮಾಡಿದ ಲಂಕಾ ಪಡೆ 19.2 ಓವರ್ ಗಳಲ್ಲಿ 170 ರನ್ ಗಳಿಗೆ ಆಲೌಟ್ ಆಗುವ ಮೂಲಕ ಸೋಲಿಗೆ ಶರಣಾದರು. ನಿಶಂಕಾ 79, ಮೆಂಡೀಸ್ 45 ರನ್ ಬಿಟ್ಟರೆ ಉಳಿದವರು ಸರಿಯಾಗಿ ಬ್ಯಾಟ್ ಬೀಸದ ಪರಿಣಾಮ 43 ರನ್ ಗಳಿಂದ ಸೋಲು ಕಂಡಿತು. ಭಾರತ ಪರ ಅರ್ಷದೀಪ್ ಸಿಂಗ್ 2, ಸಿರಾಜ್ 1, ಅಕ್ಷರ್ ಪಟೇಲ್ 2, ರವಿ ಬಿಷ್ಣೊಯಿ 1, ರಿಯಾನ್ ಪರಾಗ್ 3 ವಿಕೆಟ್ ಪಡೆದು ಮಿಂಚಿದರು. ಸೂರ್ಯಕುಮಾರ್ ಯಾದವ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.