ಪ್ರಜಾಸ್ತ್ರ ಸುದ್ದಿ (Photo X / @BCCI)
ಪರ್ತ್(Parth): ಆಸ್ಟ್ರೇಲಿಯಾ ನೆಲದಲ್ಲಿ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟೆಸ್ಟ್ ಟ್ರೋಫಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿಯಾಗಿ ಗೆಲುವು ದಾಖಲಿಸಿದೆ. 295 ರನ್ ಗಳ ಅಂತದಿಂದ ಜಯ ಸಾಧಿಸಿದ ಬೂಮ್ರಾ ಪಡೆ 5 ಪಂದ್ಯಗಳ ಸರಣಿಯಲ್ಲಿ 1-0ರಿಂದ ಮುನ್ನಡೆ ಸಾಧಿಸಿದೆ. ನಾಯಕ ಜಸ್ಪ್ರೀತ್ ಬೂಮ್ರಾ ಮೊದಲ ಇನ್ನಿಂಗ್ಸ್ ನಲ್ಲಿ 5 ಹಾಗೂ 2ನೇ ಇನ್ನಿಂಗ್ಸ್ 3 ವಿಕೆಟ್ ಪಡೆದು ಕಮಾಲ್ ಮಾಡಿದ್ದು, ಪಂದ್ಯ ಶ್ರೇಷ್ಠ ಆದರು.
ಮೊದಲ ಇನ್ನಿಂಗ್ಸ್ ನಲ್ಲಿ ಭಾರತ ಮೊದಲ ದಿನವೇ 150 ರನ್ ಗಳಿಗೆ ಆಲೌಟ್ ಆಯಿತು. ಆಗ ಕ್ರಿಕೆಟ್ ಪ್ರೇಮಿಗಳಲ್ಲಿ ಆಕ್ರೋಶ ಮೂಡಿತ್ತು. ನಂತರ ಬ್ಯಾಟ್ ಮಾಡಿದ ಆಸೀಸ್ ಸಹ 7 ವಿಕೆಟ್ ಕಳೆದುಕೊಂಡಿತು. ಆಗ ಒಂದೇ ದಿನದಲ್ಲಿ 17 ವಿಕೆಟ್ ಬಿದ್ದವು. 2ನೇ ದಿನಾಟದಲ್ಲಿ ಆಸ್ಟ್ರೇಲಿಯಾ 104 ರನ್ ಗಳಿಗೆ ಆಲೌಟ್ ಆಯಿತು. 2ನೇ ಇನ್ನಿಂಗ್ಸ್ ನಲ್ಲಿ ಕೊಹ್ಲಿ ಅದ್ಭುತ ಅಜೇಯ ಶತಕ, ಯಶಸ್ವಿ ಜೈಸ್ವಾಲ್ 161, ಕೆ.ಎಲ್ ರಾಹುಲ್ 77 ರನ್ ಗಳಿಂದಾಗಿ 487 ರನ್ ಗಳಿಗೆ 6 ವಿಕೆಟ್ ಕಳೆದುಕೊಂಡು ಡಿಕ್ಲೇಯರ್ ಮಾಡಿಕೊಂಡಿತು.
2ನೇ ಇನ್ನಿಂಗ್ಸ್ ಆರಂಭಿಸಿದ ಪ್ಯಾಟ್ ಕಮಿನ್ಸ್ ಬಳಗ 79 ರನ್ ಗಳಿಸುಷ್ಟರಲ್ಲಿ ಪ್ರಮುಖ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಹೆಡ್ ಹಾಗೂ ಮಾರ್ಸ್ ಒಂದಿಷ್ಟು ಗಟ್ಟಿಯಾಗಿ ನಿಂತರು. ಟ್ರಾವಿಸ್ ಹೆಡ್ 89, ಮಿಚಲ್ ಮಾರ್ಸ್ 47 ರನ್ ಗಳ ಕೊಡುಗೆ ನೀಡಿದರು. ಇದರಿಂದಾಗಿ 200ರ ಗಡಿ ದಾಟಲು ಸಾಧ್ಯವಾಯಿತು. ಅಂತಿಮವಾಗಿ 238 ರನ್ ಗಳಿಗೆ ಆಲೌಟ್ ಆಗಿ ಸೋಲು ಒಪ್ಪಿಕೊಂಡಿತು. ಭಾರತ ಪರ ಬೂಮ್ರಾ, ಸಿರಾಜ್ ತಲಾ 3 ವಿಕೆಟ್ ಪಡೆದು ಮಿಂಚಿದರು. ವಾಸಿಂಗ್ಟನ್ ಸುಂದರ್ 2, ಹರ್ಷಿತ್ ರಣಾ, ನಿತೀಶ್ ಕುಮಾರ್ ರೆಡ್ಡಿ ತಲಾ 1 ವಿಕೆಟ್ ಪಡೆದರು.