ಪ್ರಜಾಸ್ತ್ರ ಸುದ್ದಿ
ಹೈದ್ರಾಬಾದ್(hyderabad): ಕಳೆದ ಗುರುವಾರ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ತಾಯಿಯ ಅಂತ್ಯಸಂಸ್ಕಾರಕ್ಕೆ ಭಿಕ್ಷೆ ಬೇಡಿದ 12 ವರ್ಷದ ಬಾಲಕಿಯ ನೆರವಿಗೆ ತೆಲಂಗಾಣ ಸಿಎಂ ರೇವಂತ್(revanth reddy) ರೆಡ್ಡಿ ನಿಂತಿದ್ದಾರೆ. ಬಾಲಕಿಯ ಶಿಕ್ಷಣ, ಆರೋಗ್ಯ ಸೇರಿದಂತೆ ಪ್ರತಿಯೊಂದು ಮೂಲಭೂತ ಸೌಕರ್ಯ ಕಲ್ಪಿಸುವಂತೆ ನಿರ್ಮಲಾ ಜಿಲ್ಲೆಯ ಜಿಲ್ಲಾಧಿಕಾರಿಗೆ ಸೂಚಿಸಿದ್ದಾರೆ.
ಮುಖ್ಯಮಂತ್ರಿಯವರ ಸೂಚನೆಯ ಮೇರೆಗೆ ಬಾಲಕಿಯನ್ನು ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಕ್ಕೆ ದಾಖಲಿಸಿಕೊಳ್ಳಲಾಗಿದೆ. ಆಕೆಗೆ ಎಲ್ಲ ನೆರವು ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದಿನಗೂಲಿ ಕೆಲಸ ಮಾಡುತ್ತಿದ್ದ ಬಾಲಕಿ ತಾಯಿ ಗುರುವಾರ ನೇಣುಹಾಕಿಕೊಂಡು(Suicide) ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. 12 ವರ್ಷದ ಪುಟ್ಟ ಬಾಲಕಿ ತಾಯಿಯ ಶವವನ್ನು ಪಕ್ಕದಲ್ಲಿಟ್ಟುಕೊಂಡು ಅಂತ್ಯಸಂಸ್ಕಾರಕ್ಕೆ ಭಿಕ್ಷೆ ಬೇಡಿದ ಘಟನೆ ಸಾಕಷ್ಟು ವೈರಲ್ ಆಗಿತ್ತು. ಸಾರ್ವಜನಿಕರು ಹಾಗೂ ಪೊಲೀಸರು ಆಕೆಯ ನೆರವಿಗೆ ನಿಂತು ಅಂತ್ಯಸಂಸ್ಕಾರ ನೆರವೇರಿಸಿದ್ದರು. ಇದು ಮುಖ್ಯಮಂತ್ರಿಗಳ ಗಮನಕ್ಕೆ ಬಂದಿದ್ದು, ಬಾಲಕಿಯ ಬದುಕಿಗೆ ನೆರವಾಗಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.