ಪ್ರಜಾಸ್ತ್ರ ಸುದ್ದಿ
ಬೆಳಗಾವಿ(Belagavi): 2ಎ ಮೀಸಲಾತಿಗಾಗಿ ಪಂಚಮಸಾಲಿ ಸಮುದಾಯದವರು ಮಂಗಳವಾರ ನಡೆಸಿದ ಹೋರಾಟದಲ್ಲಿ ಲಾಠಿ ಚಾರ್ಜ್ ಆಗಿದೆ. ಇದರಿಂದಾಗಿ ಹಲವು ಜನರು ಗಾಯಗೊಂಡಿದ್ದಾರೆ. ಪ್ರತಿಭಟನಾಕಾರರು ಪೊಲೀಸರು ಮೇಲೆ ಕಲ್ಲು, ಚಪ್ಪಲಿ ಎಸೆದಿದ್ದಾರೆ. ಇದರಿಂದಾಗಿ ಪ್ರತಿಭಟನೆ ಸಂಘರ್ಷದ ಹಾದಿ ಹಿಡಿಯಿತು. ಪೊಲೀಸರು ಹಲವರನ್ನು ವಶಕ್ಕೆ ಪಡೆದು ಬಸ್ಸಿಗೆ ಹತ್ತಿಸಿದರು. ಆದರೆ, ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ಅರವಿಂದ ಬೆಲ್ಲದ, ಈರಣ್ಣ ಕಡಾಡಿ ಬಸ್ಸಗಳು ಎದುರು ನಿಂತರು. ಹೀಗಾಗಿ ಅವರನ್ನು ಕೆಳಗೆ ಇಳಿಸಿದರು.
ರಾಷ್ಟ್ರೀಯ ಹೆದ್ದಾರಿಯಲ್ಲಿ ಮಧ್ಯಾಹ್ನದ ತನಕ ಶಾಂತಿಯುತವಾಗಿ ಪ್ರತಿಭಟನೆ ನಡೆಯುತ್ತಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಥಳಕ್ಕೆ ಬರದಿರುವುದಕ್ಕೆ ಸುವರ್ಣಸೌಧ ಮುತ್ತಿಗೆ ಹಾಕಲು ಯತ್ನಿಸಿದರು. ಬಸವಜಯ ಮೃತ್ಯಂಜಯ ಸ್ವಾಮೀಜಿ ಸಂಘರ್ಷ ಘೋಷಿಸಿದರು. ಆಗ ಹೋರಾಟದ ಸ್ವರೂಪ ಬದಲಾಯಿತು. ಪೊಲೀಸರು ಬ್ಯಾರಿಕೇಡ್ ಗಳನ್ನು ಇಟ್ಟರು, ರಸ್ತೆಗಳನ್ನು ಬಂದ್ ಮಾಡಿದರು. ವಾಹನ ಸಂಚಾರ ಬಂದ್ ಆಯ್ತು. ಆಗ ಜನರು ಸಿಕ್ಕ ಸಿಕ್ಕ ಕಡೆ ಓಡಲು ಶುರು ಮಾಡಿದರು. ಲಾಠಿ ಚಾರ್ಜ್ ಆಗಿ ಹಲವುರು ಗಾಯಗೊಂಡರು. ಪೊಲೀಸರ ಮೇಲೆ ಕಲ್ಲು ತೂರಾಟ, ಚಪ್ಪಲಿ ಎಸೆತ ನಡೆಯಿತು.
ಈ ಮೊದಲು ಸಚಿವರಾದ ಹೆಚ್.ಸಿ ಮಹಾದೇವಪ್ಪ, ಲಕ್ಷ್ಮಿ ಹೆಬ್ಬಾಳ್ಕರ್, ಡಿ.ಸುಧಾಕರ್, ವೆಂಟೇಶ್ ಸ್ಥಳಕ್ಕೆ ಬಂದು ಇದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇವೆ. ಯಾರೂ ಕಾನೂನು ಕೈಗೆ ತೆಗೆದುಕೊಳ್ಳಬೇಡಿ ಎಂದರು. ಸ್ವಾಮೀಜಿಯನ್ನು ಹಿರಿಯ ಅಧಿಕಾರಿಗಳು ಭೇಟಿಯಾಗಿ ಕೆಲವೇ ಕೆಲವರು ಸಿಎಂ ಭೇಟಿಯಾಗುವಂತೆ ಮನವಿ ಮಾಡಿದರು. ಇದಕ್ಕೆ ಒಪ್ಪಲಿಲ್ಲ. ಶಾಂತಿಯುತವಾಗಿ ಸುವರ್ಣಸೌಧದ ಮುಂದೆ ಉಪವಾಸ ಸತ್ಯಾಗ್ರಹ ಮಾಡುತ್ತೇವೆ ಎಂದರು. ಮುಖ್ಯಮಂತ್ರಿ ಸ್ಥಳಕ್ಕೆ ಬರಬೇಕು. ಇಲ್ಲವೆ ನಾವೇ ಸೌಧಕ್ಕೆ ಹೋಗೋಣ ನಡೆಯಿರಿ ಎಂದು ಸ್ವಾಮೀಜಿ ಹೇಳುತ್ತಿದ್ದಂತೆ ಅಪಾರ ಸಂಖ್ಯೆಯಲ್ಲಿ ಸೇರಿದ್ದ ಜನರು ನುಗ್ಗಿದರು. ಆಗ ಚಿತ್ರಣ ಬದಲಾಗಿ ಅನೇಕರು ಗಾಯಗೊಂಡರು.