ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಮಂಡ್ಯದಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನು ಸಾಹಿತ್ಯ ಕ್ಷೇತ್ರ ಹೊರತು ಪಡಿಸಿ ವಿವಿಧ ಕ್ಷೇತ್ರದ ಗಣ್ಯರಿಗೂ ಅವಕಾಶ ನೀಡಬೇಕು ಎನ್ನುವ ಚರ್ಚೆ ಕಾವು ಪಡೆದುಕೊಂಡಿದೆ. ಈ ಮೂಲಕ ಸಾಹಿತ್ಯ, ಸಂಸ್ಕೃತಿ ವಲಯದ ಮೇಲೆ ಇತರರು ಹಿಡಿತ ಸಾಧಿಸಲು ಹವಣಿಸುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಇದರ ವಿರುದ್ಧ ಹೋರಾಟಗಳು ನಡೆಯುತ್ತಿವೆ. ಇದರ ಜೊತೆಗೆ ಸಾಹಿತ್ಯದ ವಿವಿಧ ಪ್ರಕಾರಗಳ ಪರಿಷತ್ತುಗಳಿಗೆ ನೇಮಿಸುವ ಪದಾಧಿಕಾರಿಗಳು ಆಯಾ ಕ್ಷೇತ್ರದವರೆ ಇರಬೇಕು ಅನ್ನೋ ಕಡ್ಡಾಯ ನಿಯಮ ಬರಬೇಕು. ರಾಜ್ಯ ಮಟ್ಟದಿಂದ ಹಿಡಿದು ತಾಲೂಕು ಮಟ್ಟದ ತನಕ ನೂರಕ್ಕೆ 90ರಷ್ಟು ಸಾಹಿತ್ಯೇತರರು ಪರಿಷತ್ತುಗಳು ಅಧ್ಯಕ್ಷರಾಗಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್, ಜಾನಪದ ಸಾಹಿತ್ಯ ಪರಿಷತ್, ಶರಣ ಸಾಹಿತ್ಯ ಪರಿಷತ್, ಮಕ್ಕಳ ಸಾಹಿತ್ಯ ಪರಿಷತ್, ಚುಟುಕು ಸಾಹಿತ್ಯ ಪರಿಷತ್ ಹೀಗೆ ಸಾಹಿತ್ಯ ಹಾಗೂ ಸಾಂಸ್ಕೃತಿಕ ವಲಯಕ್ಕೆ ಸಂಬಂಧಪಟ್ಟ ಪರಿಷತ್ತುಗಳಿಗೆ ಪದಾಧಿಕಾರಿಗಳನ್ನು ನೇಮಿಸುವಾಗು ಅದರಲ್ಲಿ ಅವರು ಕೃಷಿ ಮಾಡುತ್ತಿದ್ದರೆ ಸಾಮಾಜಿಕ ಚಿಂತನೆಗಳು ಹೊರ ಹೊಮ್ಮುತ್ತವೆ. ಸೃಜಶೀಲ ಚಟುವಟಿಕೆಗಳು ನಡೆಯುತ್ತವೆ. ಅಕ್ಷರ ಲೋಕದಿಂದ ಸಂಪೂರ್ಣವಾಗಿ ಆಚೆ ಇರುವ ರಾಜಕಾರಣಿಗಳನ್ನ, ಉದ್ಯಮಿಗಳನ್ನ, ಶಿಕ್ಷಕರನ್ನ ಅಷ್ಟೇ ಏಕೆ ಅನೇಕ ಕಡೆ ಅಂಗಡಿ ಮುಂಗಟ್ಟುಗಳನ್ನು ನಡೆಸುವವರನ್ನು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಜಾತಿಯ ಆಧಾರದ ಮೇಲೆ ಜನಪ್ರತಿನಿಧಿಗಳ ವಸೂಲಿಯಿಂದ ಅಧ್ಯಕ್ಷರುಗಳನ್ನು ನೇಮಿಸಲಾಗಿದೆ. ಆದರೆ, ಯಾವುದೇ ಕ್ಷೇತ್ರದಲ್ಲಿದ್ದರೂ ಸಾಹಿತ್ಯದ ಕೃಷಿಯನ್ನು ಮಾಡುತ್ತಿರುವ ಯಾರನ್ನೇ ನೇಮಕ ಮಾಡಿದರೂ ಯಾರ ತಕರಾರವೂ ಇರುವುದಿಲ್ಲ.
ತಾಲೂಕು ಸಮ್ಮೇಳನ ಮಾಡಲು 25, 30 ಲಕ್ಷ ರೂಪಾಯಿ ಖರ್ಚು ತೋರಿಸಲಾಗುತ್ತಿದೆ. ಸಂಘ ಸಂಸ್ಥೆಗಳಿಂದ, ಉದ್ಯಮಿಗಳಿಂದ, ಅಂಗಡಿಕಾರರಿಂದ ನೌಕರರಿಂದ, ರಾಜಕಾರಣಿಗಳಿಂದ, ವೈದ್ಯರಿಂದ ಹೀಗೆ ಎಲ್ಲರಿಂದ ಚಂದಾ ಸಂಗ್ರಹಿಸುವ ಕೆಲಸ ನಡೆದಿದೆ. ಇದರಲ್ಲಿ ಗೋಲ್ಮಾಲ್ ನಡೆಸಲಾಗುತ್ತಿದೆ ಎಂದು ಹೋರಾಟಗಳು ಸಹ ನಡೆದಿವೆ. ಈ ಆಡಂಬರದ ಆಡಳಿತಾತ್ಮಕ ಮನೋಭಾವ ಇಂದು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಖರ್ಚು ಬರೋಬ್ಬರಿ 25 ರಿಂದ 30 ಕೋಟಿ ಆಗುತ್ತೆ ಎಂದು ಅಂದಾಜು ಕೊಡಲಾಗಿದೆ. ಹೀಗಾಗಿ ಸಾಹಿತ್ಯ ವಲಯದವರೆ ಪರಿಷತ್ತುಗಳ ಪದಾಧಿಕಾರಿಗಳಾದರೆ ಯಾರಿಗೂ ಹೊರೆಯಾಗದಂತೆ, ಅನವಶ್ಯಕ ದುಂದುವೆಚ್ಚಕ್ಕೆ ಕಡಿವಾಣ ಹಾಕಿ, ಸೃಜನಶೀಲ ಸಮ್ಮೇಳನ ಮಾಡಲು ಸಾಧ್ಯ. ಬರಹಗಾರರಿಗೆ ಇರುವ ವೇದಿಕೆಯನ್ನು ಸಹ ಇತರರು ಕಸಿದುಕೊಂಡರೆ ಹೇಗೆ ಎನ್ನುವ ಪ್ರಶ್ನೆ ಕಾಡುತ್ತಲೇ ಇರುತ್ತೆ.