ಪ್ರಜಾಸ್ತ್ರ ಸುದ್ದಿ
ನವದೆಹಲಿ(New Delhi): ಜಗತ್ತಿನ ಶ್ರೀಮಂತ ಕ್ರಿಕೆಟ್ ಮಂಡಳಿಗಳಲ್ಲಿ ಭಾರತೀಯ ಕ್ರಿಕೆಟ್ ಮಂಡಳಿಯೂ ಒಂದು. ಇಲ್ಲಿ ಕೆಲಸ ಮಾಡುತ್ತಿರುವವರು ಕೋಟಿ ಕೋಟಿ ಲೆಕ್ಕದಲ್ಲಿ ಸಂಬಳ ಪಡೆಯುತ್ತಾರೆ. ಇದೀಗ ಖಾಲಿಯಿರುವ 7 ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ. ವಾರ್ಷಿಕವಾಗಿ 90 ಲಕ್ಷ ರೂಪಾಯಿ ವೇತನ ಸಿಗಲಿದೆ. ಈ ಬಗ್ಗೆ ಬಿಸಿಸಿಐ ತನ್ನ ವೆಬ್ ಸೈಟ್ ನಲ್ಲಿ ತಿಳಿಸಿದೆ. ಸೆಪ್ಟೆಂಬರ್ 10, 2025ರ ಸಂಜೆ 5 ಗಂಟೆಯೊಳಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಪುರುಷರ ತಂಡಕ್ಕೆ ಇಬ್ಬರು ರಾಷ್ಟ್ರೀಯ ಆಯ್ಕೆಗಾರರು, ಮಹಿಳಾ ತಂಡಕ್ಕೆ ನಾಲ್ವರು ಹಾಗೂ ಜೂನಿಯರ್ ಪುರುಷರ ತಂಡಕ್ಕೆ ಒಬ್ಬರು ಬೇಕಿದ್ದಾರೆ. ಪುರುಷರ ಆಯ್ಕೆದಾರರ ತಂಡಕ್ಕೆ ಅರ್ಜಿ ಸಲ್ಲಿಸುವವರು ಕನಿಷ್ಠ 7 ಟೆಸ್ಟ್ ಪಂದ್ಯ, 30 ಪ್ರಥಮ ದರ್ಜೆ ಪಂದ್ಯಗಳು ಅಥವ 10 ಏಕದಿನ ಮತ್ತು 20 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರಬೇಕು. 5 ವರ್ಷಗಳ ಹಿಂದೆ ನಿವೃತ್ತಿ ಆಗಿರಬೇಕು. 5 ವರ್ಷಗಳ ಕಾಲ ಬಿಸಿಸಿಐನ ಕ್ರಿಕೆಟ್ ಸಮಿತಿ ಸದಸ್ಯರಾಗಿರಬಾರದು.
ಮಹಿಳಾ ತಂಡಕ್ಕೆ ಬೇಕಾದವರು ಭಾರತೀಯ ಕ್ರಿಕೆಟ್ ತಂಡಕ್ಕೆ ಆಡಿರಬೇಕು. 5 ವರ್ಷ ಹಿಂದೆ ನಿವೃತ್ತಿ ಹಾಗೂ 5 ವರ್ಷಗಳ ಬಿಸಿಸಿಐ ಕ್ರಿಕೆಟ್ ಸಮಿತಿ ಸದಸ್ಯರಾಗಿರಬಾರದು. ಜೂನಿಯರ್ ತಂಡಕ್ಕೆ ಅರ್ಜಿ ಸಲ್ಲಿಸುವವರು ಕನಿಷ್ಠ 25 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರಬೇಕು. 5 ವರ್ಷ ಹಿಂದೆ ನಿವೃತ್ತಿ ಹಾಗೂ 5 ವರ್ಷಗಳ ಬಿಸಿಸಿಐ ಕ್ರಿಕೆಟ್ ಸಮಿತಿ ಸದಸ್ಯರಾಗಿರಬಾರದು. ಹಿರಿಯ ತಂಡದ ಆಯ್ಕೆ ಸಮಿತಿ ಸದಸ್ಯರಿಗೆ ವಾರ್ಷಿಕ 90 ಲಕ್ಷ ರೂಪಾಯಿ, ಜೂನಿಯರ್ ಆಯ್ಕೆ ಸಮಿತಿ ಸದಸ್ಯರಿಗೆ ವಾರ್ಷಿಕ 30 ಲಕ್ಷ ರೂಪಾಯಿ ವೇತನವಿದೆ.