ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ1 ಆರೋಪಿ ಪವಿತ್ರಾಗೌಡ(Pavithragowda) ಹಾಗೂ ಎ2 ಆರೋಪಿ ನಟ ದರ್ಶನ್(Darshan )ನಡುವಿನ ಸಂಬಂಧ ಏನು ಅನ್ನೋದು ಎಲ್ಲರಿಗೂ ಗೊತ್ತು. ಅದು ಅವರ ಖಾಸಗಿ ಬದುಕು. ಅದನ್ನು ಪ್ರಶ್ನೆ ಮಾಡುವ ಹಕ್ಕು ಇರುವುದು ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರಿಗೆ. ಈ ಬಗ್ಗೆ ಯಾರೂ ಚಕಾರ್ ಎತ್ತುವ ಹಾಗಿಲ್ಲ. ಈ ವಿಚಾರದಲ್ಲಿ ಕೆಲ ದೃಶ್ಯ ಮಾಧ್ಯಮಗಳು ಯಾವ ರೀತಿ ನಡೆದುಕೊಂಡಿವೆ ಎನ್ನೋದು ಜಗತ್ ಜಾಹೀರು. ಈಗ ಮತ್ತೆ ಅದೇ ಕೆಲಸವನ್ನು ಮಾಡುವ ಮೂಲಕ ಕೆಲ ದೃಶ್ಯ ಮಾಧ್ಯಮಗಳು ನೈತಿಕತೆಯಿಂದ ತಾವು ಎಷ್ಟೊಂದು ಹಿಂದೆ ಸರಿದಿದ್ದೇವೆ ಅಂತಾ ಮತ್ತೆ ಮತ್ತೆ ಸಾಬೀತು ಪಡಿಸುತ್ತಿವೆ. ಯಾಕಂದ್ರೆ ಕೊಲೆ ಪ್ರಕರಣ ಸಂಬಂಧದ ಚಾರ್ಜ್ ಶೀಟ್ ನಲ್ಲಿರುವ ಯಾವ ವಿಚಾರಗಳನ್ನು ಹೇಳಬೇಕು, ಯಾವುದನ್ನು ಹೇಳಬಾರದು ಎನ್ನುವ ಕನಿಷ್ಠ ಪ್ರಜ್ಞೆಯಿಲ್ಲದೆ ವರದಿ ಮಾಡುತ್ತಿರುವುದು.
ನಟ ದರ್ಶನ್ ಹಾಗೂ ಪವಿತ್ರಾಗೌಡ ಅವರು ಕೊಲೆ ಪ್ರಕರಣ ಸಂಬಂಧ ಏನಾದರೂ ಮೊಬೈಲ್ ಚಾಟ್ ಮಾಡಿದ್ದರೆ ವರದಿ(ಸಧ್ಯ ಚಾರ್ಟ್ ಶೀಟ್ ನಲ್ಲಿನ ಅಂಶಗಳ ವರದಿಗೆ ಹೈಕೋರ್ಟ್ ನಿರ್ಬಂಧ ಹೇರಿದೆ.) ಮಾಡಬಹುದು. ಆದರೆ ಅವರಿಬ್ಬರ ನಡುವಿನ ವೈಯಕ್ತಿಕ ಸಂಭಾಷಣೆ ಉಲ್ಲೇಖವಾಗಿದೆ ಎನ್ನುವ ಕಾರಣಕ್ಕೆ ಅದನ್ನು ದೊಡ್ಡ ಮಟ್ಟದಲ್ಲಿ ಬಹಿರಂಗಗೊಳಿಸುವ ಹಕ್ಕು ಮಾಧ್ಯಮಗಳಿಗಿದ್ಯಾ ಎನ್ನುವ ಪ್ರಶ್ನೆ ಎದ್ದಿದೆ. ದಂಪತಿ, ಪ್ರೇಮಿ-ಪ್ರೇಯಿಸಿ ಇದ್ದಾಗ ಅವರಿಬ್ಬರ ನಡುವೆ ವ್ಯಕ್ತವಾಗಿರುವ ಭಾವನೆಗಳನ್ನು, ಅವರ ತೀರ ಖಾಸಗಿ ವಿಚಾರಗಳನ್ನು ಕೆಲವೊಮ್ಮೆ ಮೊಬೈಲ್ ಚಾಟ್ ನಲ್ಲಿರುತ್ತವೆ. ಅದು ನಮ್ಮ ಕೈಗೆ ಸಿಕ್ಕಿದೆ ಎಂದಾಕ್ಷಣ ಸಭ್ಯತೆ ಮರೆತು ಸಾರ್ವಜನಿಕಗೊಳಿಸುವ ಮಟ್ಟಕ್ಕೆ ಹೋಗಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ. ಈ ವಿಚಾರದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಹಾಗೂ ಪವಿತ್ರಾಗೌಡ ಅವರು ಕಾನೂನು ಮೊರೆ ಹೋಗಲು ಅವಕಾಶವಿದೆ. ವಾಸ್ತವ ಪ್ರಕರಣ ಹೊರತು ಪಡಿಸಿ ನಮ್ಮ ಖಾಸಗಿ ಬದುಕಿನಲ್ಲಿ ಅತಿಕ್ರಮಣ ಮಾಡಿದ್ದಾರೆ ಎಂದು ದಾವೆ ಹೂಡಬಹುದು. ಮುಂದಿನ ದಿನಗಳಲ್ಲಿಯಾದರೂ ಕೆಲ ದೃಶ್ಯ ಮಾಧ್ಯಮಗಳು ಹಾಗೂ ಕೆಲ ನಿರೂಪಕರು ತಮ್ಮ ಕ್ಷುಲ್ಲಕ ಮನಸ್ಥಿತಿಯಿಂದ ಹೊರಗೆ ಬರುತ್ತಾರ ಕಾದು ನೋಡಬೇಕು.