ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ನಗರದಲ್ಲಿನ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಸಮಾಜವಾದಿ ಅಧ್ಯಯನ ಕೇಂದ್ರ ಮತ್ತು ಸಮಾಜವಾದಿ ಸಮಾಗಮ ಸಂಸ್ಥೆ ಆಯೋಜಿಸಿದ್ದ ದಕ್ಷಿಣ ಭಾರತದ ಸಮಾಜವಾದಿಗಳ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಶೀಘ್ರದಲ್ಲಿ ಬೆಂಗಳೂರಲ್ಲಿ ದಕ್ಷಿಣ ಭಾರತದ ಮುಖ್ಯಮಂತ್ರಿಗಳ ಸಮ್ಮೇಳನ ನಡೆಸಲಾಗುವುದು. ಕೇಂದ್ರ ಸರ್ಕಾರದ ಒಕ್ಕೂಟ ವ್ಯವಸ್ಥೆಯ ವಿರುದ್ಧವಾಗಿ ತೆಗೆದುಕೊಳ್ಳುತ್ತಿರುವ ನಿರ್ಧಾರಗಳ ಕುರಿತು ಚರ್ಚಿಸಲು ಸಮ್ಮೇಳನ ನಡೆಸಲಾಗುವುದು ಎಂದರು.
ಒಕ್ಕೂಟ ವ್ಯವಸ್ಥೆ ಹಾಳು ಮಾಡುವ ರೀತಿಯಲ್ಲಿ ಕೇಂದ್ರ ನಡೆದುಕೊಳ್ಳುತ್ತಿದೆ. ಇದರಿಂದಾಗಿ ದಕ್ಷಿಣ ಭಾರತದ ರಾಜ್ಯಗಳಿಗೆ ಹೆಚ್ಚು ಅನ್ಯಾಯವಾಗುತ್ತಿದೆ. ಕೇಂದ್ರಕ್ಕೆ ಹೆಚ್ಚಿನ ತೆರಿಗೆ ನೀಡುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ಆದರೆ, ನಮಗೆ ಕೇಂದ್ರದಿಂದ ಬರುತ್ತಿರುವ ಅನುದಾನದ ಪ್ರಮಾಣ ಕಡಿಮೆಯಾಗಿದೆ ಎಂದರು. ಇನ್ನು ಸಮಾಜವಾದಿಗಳ ಬೇಡಿಕೆಯಂತೆ ಕರ್ನಾಟಕದಲ್ಲಿ ಲೋಹಿಯಾ ಭವನ ನಿರ್ಮಾಣಕ್ಕೆ ಕ್ರಮ ತೆಗೆದುಕೊಳ್ಳಲಾಗುವುದು ಅಂತಾ ಹೇಳಿದರು.




