ಪ್ರಜಾಸ್ತ್ರ ಸುದ್ದಿ
ಯಾದಗಿರಿ(Yadagiri): ಶುಕ್ರವಾರ ರಾತ್ರಿ ಅನುಮಾನಸ್ಪದ ರೀತಿಯಲ್ಲಿ ಮೃತಪಟ್ಟ ನಗರ ಪೊಲೀಸ್ ಠಾಣೆ ಪಿಎಸ್ಐ(PSI) ಪರಶುರಾಮ ಪ್ರಕರಣ ಸಂಬಂಧ ತನಿಖೆಗಾಗಿ ಸಿಐಡಿ ತಂಡ ಭಾನುವಾರ ಜಿಲ್ಲೆಗೆ ಆಗಮಿಸಿದೆ. ಸಿಐಡಿ(CID) ಡಿವೈಎಸ್ಪಿ ಪುನೀತ್ ಅವರ ನೇತೃತ್ವದ ತಂಡ ಆಗಮಿಸಿದ್ದು, ಮಾಹಿತಿ ಪಡೆದುಕೊಳ್ಳುತ್ತಿದೆ.
ಸರ್ಕಾರ ಶನಿವಾರ ಸಂಜೆ ಪ್ರಕರಣವನ್ನು ಸಿಐಡಿಗೆ ವಹಿಸಿದೆ. ಇಂದು ನಗರಕ್ಕೆ ತಂಡ ಎರಡು ಕಾರುಗಳಲ್ಲಿ ಬಂದಿದೆ. ಎಫ್ಐಆರ್(FIR), ಪಂಚನಾಮೆ ಸೇರಿದಂತೆ ವಿವಿಧ ದಾಖಲೆಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಸಿಪಿಐ ಸುನಿಲ್ ಮೂಲಿಮನಿ, ಗ್ರಾಮೀಣ ಠಾಣೆ ಪಿಎಸ್ಐ ಹಣಮಂತ ಬಂಕಲಗಿ ಸಿಐಡಿ ಅಧಿಕಾರಿಗಳೊಂದಿಗಿದ್ದಾರೆ.
ಯಾದಗಿರಿ ಕಾಂಗ್ರೆಸ್ ಶಾಸಕ ಚನ್ನಾರೆಡ್ಡಿ ಪಾಟೀಲ(Channareddi patil tunnuru) ತುನ್ನೂರು ಹಾಗೂ ಇವರ ಮಗ ಪಂಪನಗೌಡ ವಿರುದ್ಧ ಎಫ್ಐಆರ್ ದಾಖಲಾಗಿದೆ. ವರ್ಗಾವಣೆ ಸಂಬಂಧ 30-40 ಲಕ್ಷ ರೂಪಾಯಿ ಹಣದ ಬೇಡಿಕೆ, ಕಿರುಕುಳ ನೀಡಲಾಗಿದೆ ಎನ್ನುವ ಗಂಭೀರ ಆರೋಪ ಕೇಳಿ ಬಂದಿದೆ. ಮಗನನ್ನು ಕಳೆದುಕೊಂಡ ಹೆತ್ತವರು, ಗಂಡನನ್ನು ಕಳೆದುಕೊಂಡ 8 ತಿಂಗಳ ಗರ್ಭಿಣಿ ಪತ್ನಿ ದುಃಖ ಎಲ್ಲರ ಕಣ್ಣುಗಳನ್ನು ತೇವಗೊಳಿಸುತ್ತಿದೆ.