ಪ್ರಜಾಸ್ತ್ರ ಸುದ್ದ
ಬೆಂಗಳೂರು(Bengaloru): ಕಳೆದ ಬಿಜೆಪಿ ಸರ್ಕಾರದಲ್ಲಿ ಆರೋಗ್ಯ ಸಚಿವರಾಗಿದ್ದ, ಸಂಸದ ಕೆ.ಸುಧಾಕರ್ ವಿರುದ್ಧ ತನಿಖೆಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಸಮಿತಿ ರಚಿಸಿದೆ. ಕೋವಿಡ್(Covid-19) ಸಂದರ್ಭದಲ್ಲಿ ನಡೆದ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಸರ್ಕಾರ ಮುಂದಾಗಿದೆ. ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಈ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಈ ಮೂಲಕ ಸಂಸದ ಸುಧಾಕರ್ ವಿರುದ್ಧ ಸಮರ ಸಾರಲು ಮುಂದಾಗಿದ್ದು, ಎಲ್ಲಿಗೆ ಹೋಗುತ್ತೆ ನೋಡಬೇಕು.
ಕೋವಿಡ್ 19 ಸಂದರ್ಭದಲ್ಲಿ ನಡೆದ ಹಗರಣದ ತನಿಖೆಗೆ ನಿವೃತ್ತ ನ್ಯಾಯಮೂರ್ತಿ ಜಾನ್ ಡಿ ಮೈಕಲ್ ಕನ್ನಾ ಅವರ ನೇತೃತ್ವದಲ್ಲಿ ವಿಚಾರಣಾ ಆಯೋಗ ತನ್ನ ಮೊದಲ ವರದಿ ನೀಡಿದೆ. ವರದಿಯಲ್ಲಿ ಹಗರಣ ನಡೆದಿದೆ. ಕ್ರಮ ಕೈಗೊಳ್ಳಬಹುದು ಎಂದು ತಿಳಿಸಿದೆ. ಹೀಗಾಗಿ ಇದರ ಪರಿಶೀಲನೆಗೆ ಡಿಸಿಎಂ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ ಎಂದು ಮುಖ್ಯಮಂತ್ರಿಗಳ ಪತ್ರದ ಮೂಲಕ ತಿಳಿಸಲಾಗಿದೆ.
ಈ ಸಮಿತಿಯಲ್ಲಿ ಗೃಹ ಸಚಿವ ಪರಮೇಶ್ವರ್, ಕಾನೂನು ಸಚಿವ ಹೆಚ್.ಕೆ ಪಾಟೀಲ, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, ಕಾರ್ಮಿಕ ಸಚಿವ ಸಂತೋಷ್ ಲಾಡ್, ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ ಅವರು ಸದಸ್ಯರಾಗಿದ್ದಾರೆ. ಕೋವಿಡ್ 19 ಸಂದರ್ಭದಲ್ಲಿ ಬಹುಕೋಟಿ ಹಗರಣ ನಡೆದಿದೆ ಎಂದು ಸ್ವತಃ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರೆ ಆರೋಪಿಸಿದ್ದಾರೆ.