ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಸಧ್ಯ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಜಿದ್ದಾಜಿದ್ದು ನಡೆಯುತ್ತಿದೆ. ಅದರಲ್ಲೂ ಮುಡಾ ಪ್ರಕರಣ ಹಿಡಿದುಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಕೆಳಗೆ ಇಳಿಸುವ ವಿಪಕ್ಷಗಳು ಸಜ್ಜಾಗಿ ನಿಂತಿವೆ. ಮತ್ತೊಂದು ಸಿದ್ದರಾಮಯ್ಯ ಬಳಿಕ ನಾನು ಸಿಎಂ ಆಗುತ್ತೇನೆ ಎನ್ನುವ ರೇಸ್ ನಲ್ಲಿರುವ ಪಟ್ಟಿ ದೊಡ್ಡದಿದೆ. ಅದರಲ್ಲಿ ಸಚಿವ ಸತೀಶ್ ಜಾರಕಿಹೊಳಿ ಹೆಸರು ಮುಂಚೂಣಿಯಲ್ಲಿದೆ. ಹೀಗಾಗಿ ಅವರು ಯಾರನ್ನೇ ಭೇಟಿಯಾದರೂ ಹಲವು ಪ್ರಶ್ನೆಗಳು ಮೂಡುತ್ತಿದೆ. ಇದೀಗ ಬಿಜೆಪಿ ರಾಜ್ಯಾಧ್ಯಕ್ಷ, ಶಾಸಕ ಬಿ.ವೈ ವಿಜಯೇಂದ್ರ ತಮ್ಮ ಬೆಂಬಲಿಗರೊಂದಿಗೆ ಸಚಿವ ಸತೀಶ್ ಜಾರಕಿಹೊಳಿಯನ್ನು ಭೇಟಿಯಾಗಿದ್ದಾರೆ.
ಶಿಕಾರಿಪುರದಲ್ಲಿ ಹಾದು ಹೋಗುವ ರಾಜ್ಯ ಹೆದ್ದಾರಿ 57ರ ಶಿವಮೊಗ್ಗ-ಶಿಕಾರಿಪುರ, ಹಾನಗಲ್-ತಡಸ ರಸ್ತೆಯಲ್ಲಿ ನೂತನವಾಗಿ ನಿರ್ಮಿಸಿರುವ ಕುಟ್ರಳ್ಳಿ ಟೋಲ್ ಗೇಟ್ ನಿಂದಾಗಿ ರೈತರಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ. ಕೂಡಲೇ ಆ ಟೋಲ್ ತೆರವುಗೊಳಿಸಬೇಕು ಎಂದು ವಿಜಯೇಂದ್ರ ಮನವಿ ಸಲ್ಲಿಸಿದ್ದಾರೆ. ಈ ಸಂಬಂಧ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕೆಲಸ ಮಾಡುವುದಾಗಿ ಸಚಿವರು ಹೇಳಿದ್ದಾರೆ ಎಂದು ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆದರೆ, ಬೇರೆ ರಾಜಕಾರಣಿಗಳಂತೆ ಎಂದಿಗೂ ಗುಟ್ಟು ಬಿಟ್ಟು ಕೊಡದ ಸತೀಶ್ ಜಾರಕಿಹೊಳಿ ಇತ್ತೀಚೆಗೆ ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಭೇಟಿಯಾಗಿದ್ದರು. ಭಾನುವಾರವಷ್ಟೇ ವಿಜಯೇಂದ್ರ ದಸರಾ ಬಳಿಕ ಸಿಎಂ ರಾಜೀನಾಮೆ ನೀಡುತ್ತಾರೆ ಎಂದಿದ್ದಾರೆ. ಮತ್ತೊಂದು ಕಡೆ ಡಿಸಿಎಂ ಡಿ.ಕೆ ಶಿವಕುಮಾರ್ ಹಾಗೂ ಎಐಸಿಸಿ ಅಧ್ಯಕ್ಷರ ಗೌಪ್ಯ ಮಾತುಕತೆ ಮಧ್ಯ ಈ ಇಬ್ಬರು ನಾಯಕರ ಭೇಟಿಯೂ ಸಾಕಷ್ಟು ಕುತೂಹಲ ಮೂಡಿಸಿದೆ.