ಪ್ರಜಾಸ್ತ್ರ ಸುದ್ದಿ
ಪ್ರಯಾಗ್ ರಾಜ್(Prayagraj): ಮಹಾಕುಂಭ ಮೇಳದಲ್ಲಿ ನಿತ್ಯ ಲಕ್ಷಾಂತರ ಜನರು ಭಾಗವಹಿಸುತ್ತಿದ್ದಾರೆ. ಇಂದು(ಬುಧವಾರ) ಮೌನಿ ಅಮವಾಸ್ಯೆ ಹಿನ್ನಲೆಯಲ್ಲಿ ಅಪಾರ ಸಂಖ್ಯೆಯಲ್ಲಿ ಸೇರಿದ ಭಕ್ತರು ಗಂಗಾ ಸ್ನಾನದಲ್ಲಿ ಭಾಗವಹಿಸುತ್ತಿದ್ದು, ಈ ವೇಳೆ ಕಾಲ್ತುಳಿತದಿಂದ(Stampede) 17 ಜನರು ಸಾವನ್ನಪ್ಪಿದ್ದಾರೆ. ಅನೇಕರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾಳಿ ಮಾರ್ಗ, ತ್ರಿವೇಣಿ ಮಾರ್ಗದಲ್ಲಿ ಕಾಲ್ತುಳಿತದಿಂದ ಈ ಅನಾಹುತ ನಡೆದಿದೆ. ಸಾವನ್ನಪ್ಪಿದವರ ಬಗ್ಗೆ ಮಾಹಿತಿ ತಿಳಿದು ಬರಬೇಕಿದೆ. ಮೌನಿ ಅಮವಾಸ್ಯೆ ಉತ್ತರ ಭಾರತ ಭಾಗದಲ್ಲಿ ತುಂಬಾ ವಿಶೇಷವಾಗಿದೆ. ಹೀಗಾಗಿ ಇಂದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೇರಿದ್ದಾರೆ. ಜನರನ್ನು ನಿಯಂತ್ರಿಸಲು ಸಂಗಮದ ಸುತ್ತಮುತ್ತ ಬ್ಯಾರಿಕೇಡ್ ಗಳನ್ನು ಹಾಕಲಾಗಿದೆ. ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.